ADVERTISEMENT

ಮಂಗಳೂರು: ಕೋವಿಡ್‌ ‘ಪರೀಕ್ಷೆ’ ಮುನ್ನಡೆಸುತ್ತಿರುವ ಸಾರಥಿ

ವಿ.ಎಸ್.ಸುಬ್ರಹ್ಮಣ್ಯ
Published 27 ಜೂನ್ 2020, 5:24 IST
Last Updated 27 ಜೂನ್ 2020, 5:24 IST
ಡಾ.ಶರತ್‌ ಕುಮಾರ್‌
ಡಾ.ಶರತ್‌ ಕುಮಾರ್‌   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿನ ಮೊದಲ ಪ್ರಕರಣ ಪತ್ತೆ ಆದಾಗ (ಮಾರ್ಚ್‌ 22) ಇಲ್ಲಿ ಕೋವಿಡ್‌ ಪ್ರಯೋಗಾಲಯವೇ ಇರಲಿಲ್ಲ. 15 ದಿನಗಳ ಬಳಿಕ (ಏಪ್ರಿಲ್‌ 7) ವೆನ್ಲಾಕ್‌ ಆಸ್ಪತ್ರೆಯಲ್ಲಿ ಆರಂಭವಾದ ಕೋವಿಡ್‌ ಪ್ರಯೋಗಾಲಯದಲ್ಲಿ ಈವರೆಗೆ 12,000ಕ್ಕೂ ಹೆಚ್ಚು ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳ ಪರೀಕ್ಷೆ ನಡೆದಿದೆ. ವೈದ್ಯರು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಗೆ ಧೈರ್ಯ ತುಂಬಿ ‘ಪರೀಕ್ಷೆ’ಯ ರಥ ಎಳೆಯುತ್ತಿದ್ದಾರೆ ಪ್ರಯೋಗಾಲಯದ ಮುಖ್ಯಸ್ಥರಾಗಿರುವ ಡಾ.ಶರತ್‌ ಕುಮಾರ್‌.

ಈ ಪ್ರಯೋಗಾಲಯದಲ್ಲಿ ಆರಂಭದಲ್ಲಿ ದಿನವೊಂದಕ್ಕೆ 48 ಮಾದರಿಗಳ ಪರೀಕ್ಷೆಯ ಸಾಮರ್ಥ್ಯ ಮಾತ್ರ ಇತ್ತು. ಈಗ ನಿತ್ಯ 250ಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಕೆಲವೊಮ್ಮೆ ಒಂದೇ ದಿನ 800ರಿಂದ 900 ಮಾದರಿಗಳ ಪರೀಕ್ಷೆಯೂ ನಡೆದಿದೆ. ರಾಜ್ಯದಲ್ಲಿ ತ್ವರಿತವಾಗಿ ಕೋವಿಡ್‌–19 ಪರೀಕ್ಷೆ ನಡೆಸುವ ಪ್ರಯೋಗಾಲಯಗಳ ಪಟ್ಟಿಗೆ ವೆನ್ಲಾಕ್‌ ಆಸ್ಪತ್ರೆ ಪ್ರಯೋಗಾಲಯವೂ ಸೇರಿದೆ.

‘ಇದು ನಾನೊಬ್ಬನೇ ಮಾಡುವ ಕೆಲಸ ಅಲ್ಲ. ವೈದ್ಯರು, ತಂತ್ರಜ್ಞರು, ಡೇಟಾ ಎಂಟ್ರಿ ಆಪರೇಟರ್‌ಗಳು, ‘ಡಿ’ ದರ್ಜೆ ನೌಕರರು ಸೇರಿ 16 ಮಂದಿ ಇದ್ದೇವೆ. ಎಲ್ಲರೂ ಕೋವಿಡ್‌–19 ಸೋಂಕಿನ ವಿರುದ್ಧದ ಸಮರದಲ್ಲಿ ಸಕ್ರಿಯವಾಗಿದ್ದೇವೆ. ಈಗ ನಮ್ಮೆಲ್ಲರಿಗೂ ಕುಟುಂಬದ ಜೊತೆಗಿನ ಸಂಪರ್ಕ ಬಹುಪಾಲು ದೂರವಾಣಿ ಕರೆಗೆ ಸೀಮಿತ’ ಎನ್ನುತ್ತಾರೆ ಡಾ.ಶರತ್‌ ಕುಮಾರ್‌.

ADVERTISEMENT

‘ಆರರಿಂದ ಎಂಟು ಗಂಟೆಗಳ ಕಾಲ ಪ್ರಯೋಗಾಲಯದಲ್ಲಿ ಇರುವಾಗ ಎಲ್ಲ ಸಿಬ್ಬಂದಿಯೂ ಪಿಪಿಇ ಕಿಟ್‌ ಧರಿಸಿಯೇ ಕೆಲಸ ಮಾಡಬೇಕು. ನಂತರ ಜಿಲ್ಲಾಡಳಿತ ವಸತಿ ಸೌಲಭ್ಯ ಕಲ್ಪಿಸಿರುವಲ್ಲಿ ತಂಗಬೇಕು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮನೆಗೆ ಭೇಟಿ ನೀಡಬೇಕಾದರೆ ಪ್ರತ್ಯೇಕ ಬಟ್ಟೆಗಳನ್ನು ಧರಿಸಿಕೊಂಡು ಹೋಗುತ್ತೇವೆ. ತಿಂಗಳಿಗೊಮ್ಮೆ ನಮ್ಮ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಆರಂಭದಲ್ಲಿ ವೈದ್ಯರು, ಸಿಬ್ಬಂದಿಯಲ್ಲೂ ಭಯವಿತ್ತು. ಕುಟುಂಬದವರಲ್ಲೂ ಆತಂಕ ಇತ್ತು. ದಿನಗಳು ಕಳೆದಂತೆ ಸುಧಾರಿಸುತ್ತಾ ಬಂತು. ಈಗ ಎಲ್ಲರಲ್ಲೂ ಧೈರ್ಯ ಬಂದಿದೆ. ಕರ್ತವ್ಯ ಎನ್ನುವುದಕ್ಕಿಂತಲೂ ಹೆಚ್ಚಾಗಿ ಜನಸೇವೆಯ ಕಾಳಜಿಯಿಂದ ಈ ಕೆಲಸ ಮಾಡಲಾಗುತ್ತಿದೆ. ಬೇರೆ ಕಡೆ ಉದ್ಯೋಗದಲ್ಲಿದ್ದ ನಾಲ್ವರು ಯುವತಿಯರು ಪ್ರಯೋಗಾಲಯದಕೆಲಸಕ್ಕೆ ಸೇರಿಕೊಂಡಿರುವುದು ಇದಕ್ಕೆ ಉದಾಹರಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.