ADVERTISEMENT

ಕೋವಿಡ್‌ ಕರಿನೆರಳು: ಅನಿಶ್ಚಿತತೆಯಲ್ಲಿ ಕಂಬಳ

ಮಾರ್ಗಸೂಚಿ ಅನ್ವಯ ಸ್ಪರ್ಧೆ ಅಸಾಧ್ಯ: ಜಿಲ್ಲಾ ಕಂಬಳ ಸಮಿತಿಯಿಂದ ಕಾದು ನೋಡುವ ತಂತ್ರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 1:58 IST
Last Updated 16 ಡಿಸೆಂಬರ್ 2020, 1:58 IST
ಕಂಬಳ -  ಸಂಗ್ರಹ ಚಿತ್ರ
ಕಂಬಳ -  ಸಂಗ್ರಹ ಚಿತ್ರ   

ಮಂಗಳೂರು: ನವೆಂಬರ್‌ ತಿಂಗಳಿಗೆ ಆರಂಭವಾಗಬೇಕಿದ್ದ ಕರಾವಳಿಯ ಜನಪದ ಕ್ರೀಡೆ ‘ಕಂಬಳ ಋತು’ ಇನ್ನೂ ಅನಿಶ್ಚಿತತೆಯಲ್ಲೇ ಇದೆ. ಈಗಿನ ಕೋವಿಡ್‌ ಮಾರ್ಗಸೂಚಿ ಅನ್ವಯ ಕಂಬಳ ನಡೆಸಲು ಅಸಾಧ್ಯವಾಗಿರುವ ಕಾರಣ, ಜಿಲ್ಲಾ ಕಂಬಳ ಸಮಿತಿಯು ಕಾದುನೋಡುವ ತಂತ್ರಕ್ಕೆ ಮೊರೆಹೋಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ 18 ಆಧುನಿಕ ಮತ್ತು ನೂರಾರು ಸಾಂಪ್ರದಾಯಿಕ ಕಂಬಳಗಳಿವೆ. ಸಾಂಪ್ರದಾಯಿಕ ಕಂಬಳಗಳಿಗೆ ಬೆರಳೆಣಿಕೆಯಷ್ಟು ಜನ ಸೇರುವುದರಿಂದ ಅದು ನಡೆಯುತ್ತಲೇ ಇದೆ. ಆದರೆ, ಆಧುನಿಕ ಕಂಬಳಕ್ಕೆ ಸಾವಿರಾರು ಜನರು ಸೇರುವುದರಿಂದ ಅದರ ಮೇಲೆ ಕೋವಿಡ್‌ ಕರಿನೆರಳು ಆವರಿಸಿದೆ.

‘ಕಂಬಳ ನಡೆಸಲು ಸಮಿತಿಯವರು ಮತ್ತುಕೋಣಗಳ ಯಜಮಾನರು ಉತ್ಸುಕರಾಗಿದ್ದಾರೆ. ಆದರೆ, ಈಗಿರುವ ಕೇಂದ್ರ ಸರ್ಕಾರದ ಅನ್‌ಲಾಕ್‌ ಮಾರ್ಗಸೂಚಿ ಅನ್ವಯ ಕಂಬಳ ನಡೆಸಲು ಅವಕಾಶವಿಲ್ಲ. ಹೀಗಾಗಿ, ಈ ತಿಂಗಳ ಅಂತ್ಯಕ್ಕೆ ಅನ್‌ಲಾಕ್‌ 7.0 ಮಾರ್ಗಸೂಚಿಯನ್ನು ಎದುರು ನೋಡುತ್ತಿದ್ದೇವೆ. ಅದರ ಅನ್ವಯ ಅವಕಾಶವಿದ್ದರೆ ಜಿಲ್ಲಾಡಳಿತದಿಂದ ಅನುಮತಿ ಪಡೆದು, ಜನವರಿಯಿಂದ ಮಾರ್ಚ್‌ವರೆಗೆ ನಡೆಯುತ್ತಿದ್ದ ಕಂಬಳಗಳನ್ನು ನಡೆಸುವ ಚಿಂತನೆಯಿದೆ’ ಎನ್ನುತ್ತಾರೆ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ್‌ ಶೆಟ್ಟಿ ಎಡ್ತೂರು.

ADVERTISEMENT

‘ಕಂಬಳ ನಡೆಯುವ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸ್ವಲ್ಪ ದಿನ ಕಾಯಲು ಅವರು ಸಲಹೆ ನೀಡಿದ್ದಾರೆ. ಈಗಿರುವ ಮಾರ್ಗಸೂಚಿ ಅನ್ವಯ 200 ಮಂದಿ ಮಾತ್ರ ಸೇರಲು ಅವಕಾಶವಿದೆ. ನಮ್ಮಲ್ಲಿ ಒಂದು ಕಂಬಳಕ್ಕೆ 50 ಸಾವಿರಕ್ಕೂ ಅಧಿಕ ಮಂದಿ ಸೇರುತ್ತಾರೆ. ಹೀಗಾಗಿ, ಕಟ್ಟುನಿಟ್ಟಾಗಿ ಕೋವಿಡ್‌ ನಿಯಮ ಪಾಲನೆ ಕಷ್ಟವಾಗಬಹುದು. ಅನುಮತಿ ಸಿಕ್ಕರೆ ಈ ಋತುವಿನ ಆರೇಳು ಕಂಬಳ ನಡೆಸುವ ಯೋಜನೆಯಿದೆ’ ಎಂದು ಹೇಳುತ್ತಾರೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ.

‘ಕಳೆದ ವರ್ಷ ಎಲ್ಲ ಕಂಬಳಗಳು ಯಶಸ್ವಿಯಾಗಿ ನಡೆದಿರುವುದು ಮತ್ತು ಹಲವು ದಾಖಲೆಗಳು ನಿರ್ಮಾಣವಾದ ಕಾರಣ ಕಂಬಳ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ಬಂದಿತ್ತು. ಹೀಗಾಗಿ, ಈ ವರ್ಷ ಕಂಬಳದ ಕೋಣಗಳ ಸಂಖ್ಯೆ ಹೆಚ್ಚಳವಾಗಿದೆ. ಒಂದೊಂದು ಕಂಬಳಗಳಲ್ಲೂ 200ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿತ್ತು. ಈ ವರ್ಷ ಕಂಬಳವೇ ನಡೆಯದಿದ್ದರೆ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗುತ್ತದೆ’ ಎನ್ನುತ್ತಾರೆ ವೇಣೂರು ಪೆರ್ಮುಡ ಕಂಬಳ ಸಮಿತಿಯ ಅಧ್ಯಕ್ಷ ನಿತೀಶ್‌ ಕೋಟ್ಯಾನ್‌.

‘ಹಗಲಿನಲ್ಲಿ ಕಂಬಳ; ಚರ್ಚೆ’

‘ಸರ್ಕಾರದ ಈಗಿನ ಮಾರ್ಗಸೂಚಿಯನ್ನು ಪಾಲಿಸಿ ಕಂಬಳ ನಡೆಸಲು ಸಾಧ್ಯವಿಲ್ಲ. ಹೊನಲು ಬೆಳಕಿನ ಬದಲು ಹಗಲಿನಲ್ಲಿಯೇ ಕಂಬಳ ಮುಗಿಸಬಹುದೇ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ. ನಮ್ಮ ಮಣ್ಣಿನ ಸಾಂಪ್ರದಾಯಿಕ ಕ್ರೀಡೆ ಉಳಿಸುವ ಜತೆಗೆ ಸಾಮಾಜಿಕ ಕಾಳಜಿಯೂ ಇದೆ. ಅದನ್ನು ಸಮತೋಲನ ಮಾಡಿ ಕಾರ್ಕಳದ ಮಿಯಾರು ಕಂಬಳವನ್ನು ನಡೆಸುತ್ತೇವೆ’ ಎಂದು ಹೇಳುತ್ತಾರೆ ಕಾರ್ಕಳ ಶಾಸಕ ಹಾಗೂ ಮಿಯಾರು ಕಂಬಳ ಸಮಿತಿ ಅಧ್ಯಕ್ಷ ವಿ. ಸುನೀಲ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.