ADVERTISEMENT

ಸಿಪಿಎಂ ಮುಖಂಡ ಬಿ.ಮಾಧವ ಇನ್ನಿಲ್ಲ

ಮಂಗಳೂರು: ಉದ್ಯೋಗ ತ್ಯಜಿಸಿ ಕಾರ್ಮಿಕ ಹೋರಾಟಕ್ಕೆ ನಾಯಕರಾಗಿದ್ದರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 4:16 IST
Last Updated 20 ಜೂನ್ 2019, 4:16 IST
ಬಿ.ಮಾಧವ
ಬಿ.ಮಾಧವ   

ಮಂಗಳೂರು: ಸಿಪಿಎಂ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮುಖಂಡ, ಕಾರ್ಮಿಕ ಮುಂದಾಳು ಬಿ.ಮಾಧವ (81) ಬುಧವಾರ ಮುಂಜಾನೆ ನಗರದ ಪಡೀಲ್‌ನ ಮೇಘನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಪಾರ್ಥಿವ ಶರೀರವನ್ನು ಬೋಳಾರದಲ್ಲಿರುವ ಸಿಪಿಎಂ ಜಿಲ್ಲಾ ಕಚೇರಿ ಎ.ಕೆ.ಜಿ. ಭವನಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಅಲ್ಲಿಯೇ ಶ್ರದ್ಧಾಂಜಲಿ ಸಭೆಯನ್ನೂ ನಡೆಸಲಾಯಿತು. ಬಳಿಕ ನಂದಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ
ನೆರವೇರಿತು.

ಕೇರಳದ ಕಾಸರಗೋಡು ಜಿಲ್ಲೆಯ ಬಳ್ಳೂರಿನಲ್ಲಿ 1938ರ ಜೂನ್‌ 14ರಂದು ಜನಿಸಿದ್ದ ಮಾಧವ, ಎಂ.ಎ ಸ್ನಾತಕೋತ್ತರ ಪದವಿಯೊಂದಿಗೆ ಎಲ್‌ಎಲ್‌ಬಿ ಪದವಿಯನ್ನೂ ಪಡೆದಿದ್ದರು. ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಉದ್ಯೋಗಿಯಾಗಿದ್ದ ಅವರು, ಮುಂಬೈ, ಉಡುಪಿ ಮತ್ತು ಮಂಗಳೂರಿನಲ್ಲಿ ಕೆಲಸ ಮಾಡಿದ್ದರು. ಎಲ್‌ಐಸಿ ಕಾರ್ಮಿಕರನ್ನು ಸಂಘಟಿಸುತ್ತಲೇ ಸಿಪಿಎಂ ಸಂಪರ್ಕಕ್ಕೆ ಬಂದಿದ್ದ ಅವರು, ನಂತರ ಉದ್ಯೋಗ ತ್ಯಜಿಸಿ ಕಾರ್ಮಿಕ ಹೋರಾಟಕ್ಕೆ ಇಳಿದಿದ್ದರು.

ADVERTISEMENT

ಸಿಪಿಎಂ ಪಕ್ಷದ ಜೊತೆಯಲ್ಲೇ ವಿಮಾ ನೌಕರರ ಸಂಘಟನೆ, ದಕ್ಷಿಣ ಕನ್ನಡ ಜಿಲ್ಲಾ ಹೆಂಚು ಕಾರ್ಮಿಕ ಸಂಘ, ಜಿಲ್ಲಾ ಮೋಟಾರ್ ಟ್ರಾನ್ಸ್‌ಪೋರ್ಟ್‌ ಅಂಡ್ ಎಂಜಿನಿಯರಿಂಗ್ ವರ್ಕರ್ಸ್ ಯೂನಿಯನ್, ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್, ಜಿಲ್ಲಾ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಸಂಘಗಳಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು, ಹಲವು ಹೋರಾಟಗಳನ್ನು ಮುನ್ನಡೆಸಿದ್ದರು.

ಸಮುದಾಯ ಕರ್ನಾಟಕ ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಮಾಧವ, ಇ.ಎಂ.ಎಸ್.ನಂಬೂದಿರಿಪ್ಪಾಡ್‌, ಎ.ಕೆ.ಗೋಪಾಲನ್, ಲೆನಿನ್ ಮತ್ತಿತರರ ಕೃತಿಗಳನ್ನು ಮಲಯಾಳ ಮತ್ತು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ್ದರು. ಸಮುದಾಯ, ಭಾರತ ವಿದ್ಯಾರ್ಥಿ ಫೆಡರೇಶನ್, ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಸೇರಿ
ದಂತೆ ಹಲವು ಸಂಘಟನೆಗಳ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದ್ದರು.

ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ, ರಾಜ್ಯ ಸಮಿತಿ ಅಧ್ಯಕ್ಷರಾಗಿ, ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಅಖಿಲ ಭಾರತ ಬೀಡಿ ಕಾರ್ಮಿಕ ಒಕ್ಕೂಟದ ಅಧ್ಯಕ್ಷ, ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಸಂಘದ ಅಖಿಲ ಭಾರತ ಪದಾಧಿಕಾರಿ ಸೇರಿದಂತೆ ಕಾರ್ಮಿಕ ಸಂಘಟನೆಗಳಲ್ಲಿ ಹಲವು ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಸಿಪಿಎಂ ಜಿಲ್ಲಾ ಸಮಿತಿಗೆ ಮೂರು ಅವಧಿಗೆ ಕಾರ್ಯದರ್ಶಿಯಾಗಿದ್ದ ಅವರು, ರಾಜ್ಯ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಅನಾರೋಗ್ಯದ ಕಾರಣದಿಂದ ಆರು ವರ್ಷಗಳ ಹಿಂದೆ ಪಕ್ಷ ಮತ್ತು ಸಂಘಟನೆಗಳ ಜವಾಬ್ದಾರಿಯಿಂದ ವಿಶ್ರಾಂತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.