ಮಂಗಳೂರು: ಭ್ರಷ್ಟಾಚಾರದ ಆರೋಪ ಹೊತ್ತಿರುವ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.
ಪಾಲಿಕೆ ಕಚೇರಿ ಒಳಗಡೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಲು ಯತ್ನಿಸಿದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ ಇಮ್ತಿಯಾಜ್ ಮಾತನಾಡಿ, ‘ಆಯುಕ್ತರ ಮನೆಯಲ್ಲಿ ಆದಾಯಕ್ಕಿಂತ ಜಾಸ್ತಿ ಆಸ್ತಿ ಪತ್ತೆ ಹಚ್ಚಿರುವ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿಲ್ಲ. ಇದಕ್ಕೆ ಪಾಲಿಕೆ ಆಡಳಿತ ಮತ್ತು ಇಲ್ಲಿನ ಶಾಸಕರು ಹಾಗೂ ರಾಜ್ಯ ಸರ್ಕಾರದ ಕೈವಾಡವಿದೆ’ ಎಂದರು.
‘ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಭ್ರಷ್ಟ ಅಧಿಕಾರಿಗಳು ಈ ನಗರಕ್ಕೆ ಮಂಗಳೂರಿಗೆ ಬೇಕಾಗಿಲ್ಲ. ಅವರನ್ನು ಕೂಡಲೇ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ‘ಪಾಲಿಕೆ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆಗಿದೆ’ ಎಂದರು.
ಪಕ್ಷದ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ, ಪ್ರಮೀಳಾ ದೇವಾಡಿಗ, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಜೆ.ಇಬ್ರಾಹಿಂ, ಪ್ರಮೀಳಾ ಶಕ್ತಿನಗರ, ದಯಾನಂದ ಶೆಟ್ಟಿ, ಅಶೋಕ್ ಶ್ರೀಯಾನ್, ಭಾರತಿ ಬೋಳಾರ, ನಾಗೇಶ್ ಕೋಟ್ಯಾನ್, ದೀಪಕ್ ಬಜಾಲ್, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ಕೃಷ್ಣ ತಣ್ಣೀರುಬಾವಿ, ರೆಹಮಾನ್, ರಿಯಾಜ್, ಶಶಿಧರ್ ಶಕ್ತಿನಗರ, ಉಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.