ADVERTISEMENT

ಮಂಗಳೂರು | ಪಂಪ್‌ವೆಲ್‌ ಮೇಲ್ಸೇತುವೆ ಬಿರುಕು: ಉದ್ಘಾಟನೆಯಾಗಿ 3 ತಿಂಗಳಾಗಿಲ್ಲ

ತರಾತುರಿ ಕಾಮಗಾರಿ ಕಾರಣ?

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 3:11 IST
Last Updated 27 ಏಪ್ರಿಲ್ 2020, 3:11 IST
ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು– ಪ್ರಜಾವಾಣಿ ಚಿತ್ರ
ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು– ಪ್ರಜಾವಾಣಿ ಚಿತ್ರ   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಮೊದಲ ಮಳೆಗೇ ಬಿರುಕು ಕಾಣಿಸಿಕೊಂಡಿದೆ. ವಾಹನ ಸಂಚಾರಕ್ಕೆ ಮುಕ್ತಗೊಂಡ ಮೂರು ತಿಂಗಳೊಳಗೆ ಮೇಲ್ಸೇತುವೆಯ ಹಲವೆಡೆ ಹಾನಿಯಾಗಿದ್ದು, ಆತಂಕ ಸೃಷ್ಟಿಸಿದೆ.

ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಮೇಲ್ಸೇತುವೆ ಕಾಮಗಾರಿ, ಜನವರಿ ಅಂತ್ಯದಲ್ಲಿ ಕೊನೆಗೊಂಡಿತ್ತು. ಜನವರಿ 31ರಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಈ ಮೇಲ್ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಈಗ ಮೇಲ್ಸೇತುವೆಯ ಮಧ್ಯ ಭಾಗದ ರಸ್ತೆಗಳು ಮತ್ತು ತಡೆಗೋಡೆಯ ಹಲವು ಕಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ಶುಕ್ರವಾರ ರಾತ್ರಿ ನಗರದಲ್ಲಿ ಮಳೆ ಸುರಿದಿತ್ತು. ಮೇಲ್ಸೇತುವೆಯಲ್ಲಿ ಸಂಗ್ರಹವಾದ ನೀರು ಕೆಳಕ್ಕೆ ಇಳಿದಿದೆ. ಆ ಬಳಿಕ ಅಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕೆಲವು ಕಡೆಗಳಲ್ಲಿ ದೊಡ್ಡ ಪ್ರಮಾಣದ ಬಿರುಕುಗಳು ಉಂಟಾಗಿವೆ. ಬಿರುಕುಗಳು ಹೆಚ್ಚುತ್ತಲೇ ಇವೆ.

ADVERTISEMENT

ತರಾತುರಿ ಕಾಮಗಾರಿ ಕಾರಣ?

600 ಮೀಟರ್‌ ಉದ್ದ ಮತ್ತು 20 ಮೀಟರ್‌ ಅಗಲವಿರುವ ಪಂಪ್‌ವೆಲ್‌ ಮೇಲ್ಸೇತುವೆ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಈ ವಿಷಯ ರಾಜಕೀಯ ವಾಕ್ಸಮರಕ್ಕೂ ಬಳಕೆಯಾಗಿತ್ತು. ಹಲವು ಬಾರಿ ಗಡುವು ವಿಧಿಸಿದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ.

ನಳಿನ್‌ ಕುಮಾರ್‌ ಕಟೀಲ್‌ ಅವರ ಒತ್ತಡಕ್ಕೆ ಮಣಿದ ನವಯುಗ ಕನ್‌ಸ್ಟ್ರಕ್ಷನ್‌ ಕಂಪನಿ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಿತ್ತು. ಸುತ್ತಲೂ ಕಾಂಕ್ರೀಟ್‌ ಬ್ಲಾಕ್‌ಗಳನ್ನು ಜೋಡಿಸಿ, ಭಾರಿ ಪ್ರಮಾಣದ ಮಣ್ಣು ತುಂಬಿಸಲಾಗಿತ್ತು. ಅದರ ಮೇಲೆ ರಸ್ತೆ ನಿರ್ಮಿಸಲಾಗಿತ್ತು.

2017ರಲ್ಲಿ ಮೇಲ್ಸೇತುವೆಯ ನಿರ್ಮಾಣ ಹಂತದಲ್ಲೇ ಬಿರುಕು ಕಾಣಿಸಿಕೊಂಡಿತ್ತು. ಕೊನೆಯ ಹಂತದಲ್ಲಿ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿರುವುದೇ ಬಿರುಕುಗಳು ಉಂಟಾಗಲು ಕಾರಣ ಎಂಬ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.