ಮಂಗಳೂರು: ಟೋಸ್ಟ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 121ರ 2025ನೇ ಸಾಲಿನ ವಾರ್ಷಿಕ ಸಮ್ಮೇಳನ ‘ಕ್ರೆಸೆಂಡೊ 100 - ಕುಡ್ಲ’ ಇದೇ 16ರಿಂದ 18ರವರೆಗೆ ನಗರದ ಅವತಾರ್ ಹೊಟೇಲ್‌ನ ಸಮಾವೇಶ ಸಭಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಟೋಸ್ಟ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 121ರ ನಿರ್ದೇಶಕಿ ಸವಿತಾ ಸಾಲಿಯಾನ್, ‘ಈ ಸಮ್ಮೇಳನದಲ್ಲಿ ಶ್ರೀಲಂಕಾದ ಭಾಷಣ ಕಲೆಯ ಚಾಂಪಿಯನ್ ಧನಂಜಯ ಹೆಟ್ಟಿಯಾರಚ್ಚಿ ಪ್ರಮುಖ ಭಾಷಣಕಾರರಾಗಿದ್ದಾರೆ. ವಿನ್ಯಾಸ ತಜ್ಞೆ ಸವೀನ್ ಹೆಗ್ಡೆ, ಉದ್ಯಮಿಗಳಾದ ಅನುಷ್ಕಾ ಜೈಸಿಂಘಾನಿ, ಕೆ.ಉಲ್ಲಾಸ್ ಕಾಮತ್, ಜಾದೂಗಾರ ಜೂನಿಯರ್ ಶಂಕರ್, ಟೋಸ್ಟ್ ಮಾಸ್ಟರ್‍ಸ್ ಪ್ರದೇಶ 13ರ ಅಂತರರಾಷ್ಟ್ರೀಯ ನಿರ್ದೇಶಕ ಪಾವಸ್ ಚಂದ್ರ ಮತ್ತಿತರರು ಭಾಗವಹಿಸಲಿದ್ದಾರೆ’ ಎಂದರು.
‘ಟೋಸ್ಟ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿದ್ದು, ಆ ಕಾರಣಕ್ಕಾಗಿ ಈ ಸಾಲಿನ ಸಮ್ಮೇಳನ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಪ್ರೇರಣಾದಾಯಕ ದಿಕ್ಸೂಚಿ ಉಪನ್ಯಾಸಗಳು, ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ, ಸಂವಾದ ಕಮ್ಮಟಗಳು, ಚರ್ಚಾ ಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇವುಗಳಲ್ಲಿ ಸಾಂಘಿಕ ಕಲಿಕೆ, ನಾಯಕತ್ವ, ಸಂಸ್ಕೃತಿ ಮತ್ತು ಸೌಹಾರ್ದದ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.
ಸಂಸ್ಥೆಯು 149 ದೇಶಗಳಲ್ಲಿ ವ್ಯಾಪ್ತಿಸಿರುವ ಈ ಸಂಸ್ಥೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ನಾಯಕರು, ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿಗಳು ಅನುಭವ, ಜ್ಞಾನವನ್ನು ಪರಸ್ಪರ ಹಂಚಿಕೊಳ್ಳಲು ಈ ಸಂಸ್ಥೆ ನೆರವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಅಧ್ಯಕ್ಷ ಅಮಿತ್ ಲಯೋನೆಲ್ ಆನಂದ, ಸಂಸ್ಥೆಯ ಪ್ರಮುಖರಾದ ಎಂ.ಎನ್.ಪೈ, ಸೋಫಿಯಾ ಝಕರಿಯಾಸ್, ಅನಿತಾ ಕೊರ್ಡೆರೊ, ಸಿ.ಕೆ.ಬಲ್ಲಾಳ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.