ಪ್ರಾತಿನಿಧಿಕ ಚಿತ್ರ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗ್ರಾಮದ ಸ್ನಾನಘಟ್ಟದ ಸಮೀಪದ ಕಾಡಿನಲ್ಲಿ ವಶಕ್ಕೆ ಪಡೆದಿದ್ದ ಮೃತದೇಹಗಳ ಅವಶೇಷಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಎಸ್‌ಐಟಿಗೆ ತಲುಪಿದೆ ಎಂದು ಗೊತ್ತಾಗಿದೆ.
ಧರ್ಮಸ್ಥಳದ ಸ್ನಾನಘಟ್ಟ ಪಕ್ಕದ ಬಂಗ್ಲೆಗುಡ್ಡೆ ಕಾಡಿನಲ್ಲಿ ನಡೆದಿದ್ದ ಶೋಧ ಕಾರ್ಯದ ವೇಳೆ ಎರಡು ಕಡೆ (6 ಮತ್ತು 11ಎ) ಸಿಕ್ಕಿದ್ದ ಮೃತದೇಹಗಳ ಅವಶೇಷಗಳು ಪುರುಷರದ್ದು ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ಹೇಳಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಮೃತದೇಹಗಳ ಅವಶೇಷಗಳ ಭೌತಿಕ ಲಕ್ಷಣಗಳು ಹಾಗೂ ಅವುಗಳು ಪತ್ತೆಯಾಾಗ ಇದ್ದ ಸ್ಥಿತಿಯ ಆಧಾರದಲ್ಲಿ ಅವುಗಳು ಪುರುಷರದ್ದು ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ವಿವರಿಸಲಾಗಿದೆ. ಆದರೆ ಈ ಅಂಶವು ವಂಶವಾಹಿ ವಿಶ್ಲೇಷಣೆಯನ್ನು ಆಧರಿಸಿಲ್ಲ. ಆ ಮೃತದೇಹಗಳ ಅವಶೇಷಗಳಿಗೆ ಸಂಬಂಧಿಸಿದಂತೆ ಕುಟುಂಬಸ್ಥರ ಡಿಎನ್‌ಎ ಮಾದರಿಗಳು ಲಭ್ಯವಿಲ್ಲ. ಹಾಗಾಗಿ ಅದು ಯಾರ ಮೃತದೇಹ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಮೃತದೇಹ ಮೂಳೆಗಳ ಸ್ಥಿತಿಗತಿಯ ಕುರಿತಾದ ವಿವರ ಮಾತ್ರ ವರದಿಯಲ್ಲಿದೆ ಎಂದು ಮೂಲಗಳು ಹೇಳಿವೆ.
‘ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸುವಂತೆ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಯಾರಿಂದಲೂ ಸೂಚನೆ ಬಂದಿಲ್ಲ. ಅಗತ್ಯಬಿದ್ದರೆ ಇದುವರೆಗಿನ ತನಿಖೆಯ ವರದಿಯನ್ನು ಸಲ್ಲಿಸಬಹುದು. ಹೊಸ ಅಂಶಗಳ ಆಧಾರದಲ್ಲಿ ಆ ವರದಿಯನ್ನು ಆಗಾಗ ಪರಿಷ್ಕರಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.