
ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪರಿಸರದ ತೋಟಗಳಿಗೆ ಕಾಡಾನೆ ನಿರಂತರ ದಾಳಿ ಮಾಡುತ್ತಿದ್ದು, ಸಾಕಷ್ಟು ಕೃಷಿ ಹಾನಿ ಮಾಡಿದೆ. ತೋಟಗಳಿಗೆ ಆನೆ ನುಗ್ಗುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಬುಧವಾರ ನಸುಕಿನಲ್ಲಿ ಪೆರ್ನಾಜೆಯ ಕುಮಾರ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ 10 ಬಾಳೆ ಗಿಡಗಳನ್ನು ನಾಶ ಮಾಡಿದೆ. 4 ದೀವಿ ಹಲಸು ಮರಕ್ಕೆ ಹಾನಿ ಮಾಡಿದೆ.
ಸುಳ್ಯ ತಾಲ್ಲೂಕಿನ ಮಂಡೆಕೋಲು, ಕರ್ನಾಟಕ ಕೇರಳ ಗಡಿಪ್ರದೇಶ ವ್ಯಾಪ್ತಿಯ ಮುರೂರು, ಬೆಳ್ಳಿಪ್ಪಾಡಿ, ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಹಿಂಡಿನ ಪೈಕಿ ಒಂಟಿ ಸಲಗವೊಂದು ಬೇರ್ಪಟ್ಟು ಕನಕಮಜಲು-ಮುಗೇರು ಮೂಲಕವಾಗಿ ಪೆರ್ನಾಜೆ ಪರಿಸರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಕಾಡಾನೆ ಓಡಾಟ ಇರುವುದರಿಂದ ಕೃಷಿಕರು ತೋಟಗಳಿಗೆ ಹೋಗುವಾಗ ಎಚ್ಚರ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ. ಕೃಷಿ ಹಾನಿ ಮಾಡುತ್ತಿರುವ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಕುಮಾರ್ ಪೆರ್ನಾಜೆ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.