ADVERTISEMENT

ಕಣ್ವತೀರ್ಥ: ಸಮುದ್ರರಾಜನಿಗೆ ಪೂಜೆ ಸಲ್ಲಿಸಿದ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 6:41 IST
Last Updated 11 ಜನವರಿ 2024, 6:41 IST
ಕಣ್ವತೀರ್ಥದಲ್ಲಿ ಪೇಜಾವರ ಶ್ರೀಗಳು ಸಮುದ್ರ ರಾಜನಿಗೆ ಹಾಲೆರೆದು ಪೂಜಿಸಿದರು
ಕಣ್ವತೀರ್ಥದಲ್ಲಿ ಪೇಜಾವರ ಶ್ರೀಗಳು ಸಮುದ್ರ ರಾಜನಿಗೆ ಹಾಲೆರೆದು ಪೂಜಿಸಿದರು   

ಮಂಗಳೂರು: ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಂಗಳವಾರ ತಾಲ್ಲೂಕಿನ ಕಣ್ವತೀರ್ಥ ಮಠಕ್ಕೆ ಭೇಟಿ ನೀಡಿದರು.

ಅಲ್ಲಿನ ತೀರ್ಥಕೆರೆಯಲ್ಲಿ ತೀರ್ಥಸ್ನಾನ ಮಾಡಿದ ಶ್ರೀಗಳು ರಾಮಾಂಜನೇಯ ದೇವರಿಗೆ ಆರತಿ ಬೆಳಗಿದರು. ಗ್ರಾಮದ ಬೋವಿ ಸಮಾಜ, ಗಟ್ಟಿ ಸಮಾಜ, ಮಳಿಯಾಳಿ ಬಿಲ್ಲವ, ಬಂಟ, ಮೊಗವೀರ, ಬ್ರಾಹ್ಮಣ ಸಮಾಜ ಸಹಿತ ವಿವಿಧ ಸಮುದಾಯಗಳ ಪ್ರಮುಖರು, ಗುರಿಕಾರರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸಾರ್ವಜನಿಕರ ಜೊತೆಗೂಡಿ ಮೆರವಣಿಗೆಯ ಮೂಲಕ ಕಡಲ ಕಿನಾರೆಗೆ ತೆರಳಿದ ಶ್ರೀಗಳು ಸಮುದ್ರ ರಾಜನಿಗೆ ಹಾಲೆರೆದು, ಹೂ ಹಣ್ಣು ಸಹಿತ ಅಭಿಷೇಕದೊಂದಿಗೆ ಆರತಿ ಬೆಳಗಿದರು.

ಸಮುದ್ರ ಸ್ನಾನ ಮಾಡಿದ ಬಳಿಕ ಶ್ರೀಗಳು, ರಾಮಾಂಜನೇಯ ದೇವಳದ ನವೀಕೃತ ಹೊರ ಸುತ್ತು ಪೌಳಿಯನ್ನು ಲೊಕಾರ್ಪಣೆಗೊಳಿಸಿದರು. ಸುತ್ತು ಪೌಳಿ ನವೀಕರಣದ ಉಸ್ತುವಾರಿ ವಹಿಸಿದ್ದ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಯನ್ನು ಶ್ರೀಗಳು ಗೌರವಿಸಿದರು.

ADVERTISEMENT

ಅಷ್ಟಮಠಗಳ ಮೂಲ ಮಠವಾದ ಕಣ್ವತೀರ್ಥ ಮಠದಲ್ಲಿ ಶ್ರೀರಾಮನ ಜೊತೆಗೆ ವಿಠಲನೂ ಇದ್ದಾನೆ. ರಾಮವಿಠಲ ನಮ್ಮ ಮಠದ ಪಟ್ಟದ ದೇವರು. ಈ ಕ್ಷೇತ್ರ ಕಣ್ವ ಮಹರ್ಷಿಯ ತಪೋಭೂಮಿ, ಆಚಾರ್ಯ ಮಧ್ವರು ಆರಾಧಿಸಿದ ಮೂಲ ಮಠ ಇದಾಗಿದ್ದು, ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟಿದೆ. ಗ್ರಹಣ ಕಾಲದಲ್ಲಿ ಮಧ್ವರು ಸಮುದ್ರ ಸ್ನಾನ ಮಾಡಿದ ಪವಿತ್ರ ಪ್ರದೇಶವಿದು ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಮಧುಸೂದನ ಆಚಾರ್ಯ ಕಣ್ವತೀರ್ಥ, ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಮಂಜೇಶ್ವರ ಮದನಂತೇಶ್ವರ ದೇವಳದ ಆಡಳಿತ ಮೊಕ್ತೇಸರ ಟಿ. ಗಣಪತಿ ಪೈ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.