ADVERTISEMENT

ಚಿನ್ನ ಅಕ್ರಮ ಸಾಗಣೆ: ಕಸ್ಟಮ್ಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:58 IST
Last Updated 15 ಡಿಸೆಂಬರ್ 2021, 4:58 IST

ಮಂಗಳೂರು: ಶಾರ್ಜಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹ 16.79 ಲಕ್ಷ ಮೌಲ್ಯದ 338 ಗ್ರಾಂ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನ ಈ ವ್ಯಕ್ತಿ, ಸ್ಟೀರಿಯೊ ಕೇಬಲ್‌, ಬರ್ನರ್ ಸ್ಟ್ಯಾಂಡ್, ಕ್ಯಾಂಡಲ್ ಹೋಲ್ಡರ್ ಸ್ಟ್ಯಾಂಡ್‌ಗಳಲ್ಲಿ ಚಿನ್ನ ಅಡಗಿಸಿಟ್ಟು ಸಾಗಣೆ ಮಾಡಲು ಯತ್ನಿಸಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಗೆ ಕಿರುಕುಳ: ಮೂವರ ಬಂಧನ

ADVERTISEMENT

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಇಬ್ಬರು ಮಂಗಳೂರಿನವರು ಹಾಗೂ ಮತ್ತೊಬ್ಬ ಕಾಸರಗೋಡಿನವ ಎಂದು ತಿಳಿದು ಬಂದಿದೆ. ತನ್ನ ಮಗಳಿಗೆ ಮದ್ಯ ಕುಡಿಸಿ, ಮಾದಕ ವಸ್ತು ನೀಡಿ, ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬ ಆರೋಪಿಯು ಈ ಹಿಂದೆ ಚಿಲಿಂಬಿಗುಡ್ಡೆಯಲ್ಲಿ ನಡೆದ ಇದೇ ರೀತಿಯ ಪ್ರಕರಣದ ಆರೋಪಿಯಾಗಿದ್ದು, ಮಗುವಿನ ತಾಯಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಹಲ್ಲೆ: ಐವರ ಬಂಧನ

ಮಂಗಳೂರು: ನೀರುಮಾರ್ಗ ಸಮೀಪದ ಪಡು ಅಂಚೆ ಕಚೇರಿ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು, ಸುವಿತ್ ರಂಗಪಾದೆ, ಗಣೇಶ್, ಚೇತನ್, ಪರೀಕ್ಷಿತ್ ಪಡು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಿಯಾಜ್ ಕಾರಿನಲ್ಲಿದ್ದಾಗ ಅಲ್ಲಿ ಬಂದ ತಂಡ ಚೂರಿಯಿಂದ ಹಲ್ಲೆ ನಡೆಸಿ, ಪರಾರಿಯಾಗಿತ್ತು.

ರಿಯಾಜ್ ಮೇಲೆ ಪ್ರಕರಣ: ಆರೋಪಿಗಳು ರಿಯಾಜ್ ಪರಿಚಯಸ್ಥರಾಗಿದ್ದು, ಈ ಹಿಂದೆಯೂ ಅವರ ನಡುವೆ ಜಗಳ ನಡೆದಿದೆ. ಪ್ರಕರಣದ ಇನ್ನುಳಿದ ಆರೋಪಿಗಳನ್ನು ಪೊಲೀಸರು ಶೀಘ್ರ ಪತ್ತೆ ಮಾಡಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ರಿಯಾಝ್ ಮೇಲೆ ಈ ಹಿಂದೆ ಐದು ಠಾಣೆಗಳಲ್ಲಿ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಈ ವ್ಯಕ್ತಿ ನಡೆಸುತ್ತಿದ್ದ ಕೆಲವು ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಹಿಂದೆ ಸ್ಥಳೀಯ ಯುವಕರು ಮತ್ತು ಈತನ ಮಧ್ಯೆ ಸಂಘರ್ಷಗಳು ನಡೆದಿವೆ. ಅದೇ ಹಿನ್ನೆಲೆಯಲ್ಲಿ ಈ ಘಟನೆಯೂ ನಡೆದಿರುವ ಸಾಧ್ಯತೆ ಇದೆ. ಈ ಘಟನೆ ನಡೆದ ಬಳಿಕ ರಿಯಾಜ್ ಮೇಲೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳ ಸಾಗಾಟ, ಅನೈತಿಕ ವ್ಯವಹಾರ ಬಗ್ಗೆ ದೂರು ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.