ADVERTISEMENT

ಮಂಗಳೂರು: ‘ಹೈನು’ ಹೊನಲಿಗೆ ಬೇಕಿದೆ ಹೊಸ ಚೇತನ

ಸಂಧ್ಯಾ ಹೆಗಡೆ
Published 1 ಜನವರಿ 2024, 7:58 IST
Last Updated 1 ಜನವರಿ 2024, 7:58 IST
ಮಂಗಳೂರಿನ ಡೊಂಗರಕೇರಿ ಪೇಟೆಯ ನಡುವೆ ಸೊಂಪಾಗಿ ಬೆಳೆದಿರುವ ಹಸುಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಡೊಂಗರಕೇರಿ ಪೇಟೆಯ ನಡುವೆ ಸೊಂಪಾಗಿ ಬೆಳೆದಿರುವ ಹಸುಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಮಂಗಳೂರು: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ದುಬಾರಿಯಾದ ಪಶು ಆಹಾರ ಇಂತಹ ಹಲವಾರು ಕಾರಣಗಳಿಂದ ಜಿಲ್ಲೆಯಲ್ಲಿ ಹೈನುಗಾರಿಕೆ ಸೊರಗುತ್ತಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹಾಲಿನ ಬೇಡಿಕೆ ಏರಿಕೆಯತ್ತ ಸಾಗಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಹೈನುಗಾರಿಕೆ ಉತ್ತೇಜಿಸುವ ಹಲವಾರು ಯೋಜನೆಗಳು ಅನುಷ್ಠಾನಗೊಂಡಿವೆ. ಆದರೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 740ರಷ್ಟು ಸಹಕಾರ ಸಂಘಗಳಿಂದ ಪ್ರತಿನಿತ್ಯ ಸಂಗ್ರಹವಾಗುವ ಸರಾಸರಿ ಹಾಲಿನ ಪ್ರಮಾಣ 3.68 ಲಕ್ಷ ಲೀಟರ್‌ ಮಾತ್ರ. ಹಾಲು, ಮೊಸರು, ಹಾಲಿನ ಉತ್ಪನ್ನಗಳ ತಯಾರಿಕೆಗೆ ದಿನವೊಂದಕ್ಕೆ ಬೇಕಾಗುವ ಹಾಲಿನ ಪ್ರಮಾಣ ಸುಮಾರು 6 ಲಕ್ಷ ಲೀಟರ್.

ಕಾರಣಗಳೇನು?: 2019ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿರುವ ಜಾನುವಾರುಗಳು 2.50 ಲಕ್ಷ. ಇವುಗಳಲ್ಲಿ ಸುಮಾರು 50ಸಾವಿರದಷ್ಟು ದೇಸಿ ಹಸುಗಳು. ಅಂದಾಜಿನಂತೆ ಶೇ 10ರಷ್ಟು ಹೈನುಗಾರರು ಹಸುಗಳನ್ನು ಹಟ್ಟಿಯ ಹೊರಗೆ ಮೇಯಲು ಬಿಡುತ್ತಾರೆ. ಅದರಲ್ಲೂ ಹೆಚ್ಚಿನವರು ಮೇಯಲು ಬಿಡುವುದು ದೇಸಿ ಹಸುಗಳನ್ನು ಮಾತ್ರ. ಹೀಗಾಗಿ, ಪಶು ಆಹಾರದ ಅವಲಂಬನೆ ರಾಜ್ಯದ ಉಳಿದ ಜಿಲ್ಲೆಗಳಿಗಿಂತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿದೆ. ಬೇರೆ ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ಗೆ 200ರಿಂದ 250 ಗ್ರಾಂ ಪಶು ಆಹಾರ ಬಳಕೆಯಾಗುತ್ತಿದ್ದರೆ, ಉಭಯ ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ಗೆ 350ರಿಂದ 500 ಗ್ರಾಂ ಪಶು ಆಹಾರ ಬಳಕೆಯಾಗುತ್ತಿದೆ. ಇದು ರಾಜ್ಯದಲ್ಲೇ ಗರಿಷ್ಠ ಪ್ರಮಾಣ ಎಂದು ಅಂದಾಜಿಸಲಾಗಿದೆ ಎನ್ನುತ್ತಾರೆ ಪಶುವೈದ್ಯರೊಬ್ಬರು.

ADVERTISEMENT

2019ರಲ್ಲಿ ಕೋವಿಡ್ ಸಾಂಕ್ರಾಮಿಕ ದಾಳಿಯಿಟ್ಟಾಗ ಉದ್ಯೋಗ ಕಳೆದುಕೊಂಡು ಮೂಲನೆಲೆಗೆ ಬಂದಿದ್ದ ಹಲವರು ದೈನಂದಿನ ಆದಾಯಕ್ಕೆ ಹೈನುಗಾರಿಕೆಯನ್ನು ಅವಲಂಬಿಸಿದರು. ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಮೇಲೆ ಜಾನುವಾರುಗಳನ್ನು ಮಾರಾಟ ಮಾಡಿ ಮತ್ತೆ ನಗರದತ್ತ ವಲಸೆ ಬೆಳೆಸಿದ್ದಾರೆ. ಇದರ ಜೊತೆಗೆ, ಹೆಚ್ಚುತ್ತಿರುವ ಅಡಿಕೆ ದರದಿಂದ ಆಕರ್ಷಿತರಾಗಿರುವ ಅನೇಕರು, ಹೈನುಗಾರಿಕೆ ಬಗ್ಗೆ ನಿರಾಸಕ್ತರಾಗಿ, ಅಡಿಕೆ ಬೆಳೆ ಪ್ರದೇಶ ವಿಸ್ತರಣೆಗೆ ಉತ್ಸುಕರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು 4,000ದಷ್ಟು ಜಾನುವಾರುಗಳು ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಭಾಗಕ್ಕೆ ಮಾರಾಟವಾಗಿರುವ ಸಾಧ್ಯತೆ ಇದೆ. ಗಣತಿ ಪ್ರಕಾರ ಜಿಲ್ಲೆಯಲ್ಲಿ 2.50 ಲಕ್ಷ ಜಾನುವಾರುಗಳು ಇದ್ದರೂ, ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ಇಳಿಕೆಯಾಗಿದ್ದು, ಪ್ರಸ್ತುತ 2.30 ಲಕ್ಷದಷ್ಟು ಜಾನುವಾರುಗಳು ಇದ್ದಿರಬಹುದು ಎಂದು ಅವರು ವಿವರಿಸಿದರು.

ಉತ್ಪಾದನಾ ವೆಚ್ಚ ಅಧಿಕ: ಉಡುಪಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ ಕಡಿಮೆ. ಬೈಹುಲ್ಲನ್ನು (ಒಣ ಹುಲ್ಲು) ಹೊರ ಜಿಲ್ಲೆ, ಕೆಲವೊಮ್ಮೆ ಆಂಧ್ರಪ್ರದೇಶದಿಂದ ಖರೀದಿಸಬೇಕಾಗುತ್ತದೆ. ಸಾಗಣೆ ವೆಚ್ಚವೇ ಅಧಿಕವಾಗುತ್ತದೆ. ಹಸಿರು ಹುಲ್ಲು ಬೆಳೆಯುವ ಪ್ರದೇಶವೂ ಅತ್ಯಲ್ಪ. ಪಶು ಆಹಾರದ ಕಚ್ಚಾವಸ್ತುಗಳಾದ ಜೋಳ, ಸೋಯಾ, ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹತ್ತಿ ಜೊತೆಗೆ ಗೋದಿ ಬೂಸಾ ಯಾವುವೂ ಸ್ಥಳೀಯವಾಗಿ ಉತ್ಪಾದನೆಯಾಗುವಂಥವಲ್ಲ. ಹೀಗಾಗಿ, ಇಲ್ಲಿ ಹೈನುಗಾರಿಕೆ ಲಾಭದಾಯಕ ಅಲ್ಲ ಅನ್ನುವುದಕ್ಕಿಂತ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆ ಎನ್ನುವುದು ಹೆಚ್ಚು ಸೂಕ್ತ ಎನ್ನುತ್ತಾರೆ ಪಶು ವೈದ್ಯ ಡಾ. ವಸಂತ್ ಶೆಟ್ಟಿ.

ಬಹು ಆಯಾಮ: ಹಾಲು ಮಾರಾಟಕ್ಕೆ ಸೀಮಿತವಾಗಿ ಯೋಚಿಸಿದರೆ ಹೈನುಗಾರಿಕೆ ಲಾಭದಾಯಕವಲ್ಲ. ಒಂದು ಚೀಲ ಪಶು ಆಹಾರದ ಬೆಲೆ ₹1,400ಕ್ಕೆ ತಲುಪಿದೆ. ಬೈಹುಲ್ಲು ಒಂದು ಕಂತೆಗೆ ₹35ರಿಂದ ₹36 ದರವಿದೆ. ಒಂದು ಲೀಟರ್ ಹಾಲಿಗೆ ಅರ್ಧ ಕೆ.ಜಿ. ಪಶು ಆಹಾರ ನೀಡಬೇಕಾಗುತ್ತದೆ. ಎಸ್‌ಎನ್ಎಫ್ ಶೇ 8.5, ಫ್ಯಾಟ್ ಶೇ 4 ಇದ್ದರೆ ಒಂದು ಲೀಟರ್ ಹಾಲಿಗೆ ₹35.87  ಜೊತೆಗೆ ಸರ್ಕಾರ ನೀಡುವ ₹5 ಪ್ರೋತ್ಸಾಹಧನ ಸೇರಿ ಲೀಟರ್‌ವೊಂದಕ್ಕೆ ₹40.87 ದರ ಲಭ್ಯವಾಗುತ್ತದೆ. ಇವೆಲ್ಲ ಲೆಕ್ಕಾಚಾರ ಹಾಕಿದರೆ ಹೈನುಗಾರಿಕೆಯಲ್ಲಿ ಆದಾಯ ಮತ್ತು ವೆಚ್ಚ ಸರಿದೂಗುತ್ತದೆ ಎನ್ನುತ್ತಾರೆ ವಗ್ಗದ ಹೈನುಗಾರ ಐವನ್ ಡೇಸಾ.

ಆದರೆ, ಹೈನುಗಾರಿಕೆಯನ್ನು ಭಿನ್ನ ದೃಷ್ಟಿಕೋನದಿಂದ ಯೋಚಿಸಿದಾಗ ಸೆಗಣಿಯಿಂದ ಬಯೊಗ್ಯಾಸ್, ಸ್ಲರಿಯನ್ನು ತೋಟಕ್ಕೆ ಬಳಸಿ ಉತ್ತಮ ಬೆಳೆ ತೆಗೆಯಬಹುದು. ಭತ್ತ ಕೃಷಿಗೆ ಗೊಬ್ಬರಕ್ಕೆ ವೆಚ್ಚ ಮಾಡುವ ಹಣ ಉಳಿತಾಯವಾಗುತ್ತದೆ. ಭತ್ತ ಬೆಳೆದರೆ ಬೈ ಹುಲ್ಲು ಸ್ವಾವಲಂಬನೆ ಸಾಧ್ಯವಾಗುತ್ತದೆ. ಸೆಗಣಿಗೆ ಒಂದು ಬುಟ್ಟಿಗೆ ಕನಿಷ್ಠ ದರ ₹65 ಇದ್ದು, ಇದನ್ನು ಮಾರಾಟ ಮಾಡಿ ಕೂಡ ಹಣ ಗಳಿಸಬಹುದು ಎನ್ನುತ್ತಾರೆ ಅವರು.

ಬದಲಾದ ಮನಃಸ್ಥಿತಿ: ‘1960ರ ದಶಕದಿಂದ ನನ್ನ ಮಾವ (ಮಾಜಿ ಶಾಸಕ ಎನ್‌. ಶಿವರಾವ್) ನಡೆಸುತ್ತಿದ್ದ ಹೈನುಗಾರಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಆದರೆ, 19 ವರ್ಷಗಳಿಂದ ನಡೆಸುತ್ತಿದ್ದ ಪಶು ಆಹಾರ ತಯಾರಿಕೆಯನ್ನು ಒಂದು ತಿಂಗಳಿನಿಂದ ಸ್ಥಗಿತಗೊಳಿಸಬೇಕಾಯಿತು. ಉತ್ಪಾದನಾ ವೆಚ್ಚ ಅಧಿಕಗೊಂಡಿದೆ. ಪಶು ಆಹಾರ ಉದ್ಯಮ ಆರಂಭಿಸುವಾಗ ಜೋಳ ಕೆ.ಜಿ.ಯೊಂದಕ್ಕೆ ₹12ಕ್ಕೆ ಲಭ್ಯವಾಗುತ್ತಿತ್ತು, ಈಗ ₹29ಕ್ಕೆ ತಲುಪಿದೆ. ದುಬಾರಿಯಾದ ಕಚ್ಚಾವಸ್ತು, ಕೆಲಸಗಾರರ ಅಲಭ್ಯತೆ ಹೀಗೆ ಹಲವಾರು ಕಾರಣಗಳು ಉದ್ದಿಮೆ ನಿಲ್ಲಿಸಲು ಕಾರಣವಾದವು’ ಎನ್ನುತ್ತಾರೆ ಉಳಾಯಿಬೆಟ್ಟುವಿನ ಹೈನುಗಾರ ಮಹಿಳೆ ಸುಭದ್ರಾ ರಾವ್.

‘ಹಿಂದೆ ತೋಟದ ಹುಲ್ಲು, ಕಾಡಿನ ಸೊಪ್ಪು, ಅಕ್ಕಿ ಬೇಯಿಸಿ ಕೊಟ್ಟರೆ ಪಶುಗಳಿಗೆ ಆಹಾರವಾಗುತ್ತಿತ್ತು. ಈಗ ಹುಲ್ಲು ಬೆಳೆಸುವ ಪ್ರದೇಶ ಕಡಿಮೆಯಾಗಿದೆ. ಪಶು ಆಹಾರದ ಅವಲಂಬನೆ ಹೆಚ್ಚಾಗಿದೆ. ಹಟ್ಟಿ ಕೆಲಸದ ಬಗ್ಗೆ ಕೆಲವರಿಗೆ ಅಸಡ್ಡೆ ಭಾವ ಇದೆ. ಕಡಿಮೆ ಸಂಬಳ ಸಿಕ್ಕರೂ ಸಾಕು ನಗರದ ಉದ್ಯೋಗವೇ ಬೇಕು ಎಂಬ ಮನಃಸ್ಥಿತಿ ಬದಲಾಗಬೇಕಾಗಿದೆ. ನೀರಿನ ಲಭ್ಯತೆ, ಮನೆಯಲ್ಲೇ ಹಸಿರು ಹುಲ್ಲು ಬೆಳೆಸಿಕೊಂಡು, ಸ್ವಂತ ದುಡಿಮೆ ಮಾಡಿದರೆ, ಮೂರ್ನಾಲ್ಕು ಹಸುಗಳ ಸಾಕಣೆ ಮಾಡಿ ಲಾಭದಾಯಕ ಹೈನುಗಾರಿಕೆ ಮಾಡಬಹುದು’ ಎಂದು ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯೂ ಆಗಿರುವ ಅವರು ಸಲಹೆ ನೀಡುತ್ತಾರೆ. 

‘ನಮ್ಮ ಹಟ್ಟಿಯಲ್ಲಿ 40 ಜಾನುವಾರುಗಳು ಇವೆ. ದಿನಕ್ಕೆ ಈ ಮೊದಲು ಸರಾಸರಿ 130 ಲೀಟರ್ ಹಾಲು ಸಿಗುತ್ತಿತ್ತು. ಈಗ ಇದು 110 ಲೀಟರ್‌ಗೆ ಇಳಿಕೆಯಾಗಿದೆ’ ಎಂದು ಅನುಭವ ಹಂಚಿಕೊಂಡರು.

ಮಂಗಳೂರಿನ ಡೊಂಗರಕೇರಿ ಪೇಟೆಯ ನಡುವೆ ಸೊಂಪಾಗಿ ಬೆಳೆದಿರುವ ಹಸುಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
‘ಸಮತೋಲನ ಆಹಾರ ಬಹುಮುಖ್ಯ’
ಹಸುಗಳಲ್ಲಿ ಗ‌ರ್ಭ ಕಟ್ಟುವುದು ಸಮಸ್ಯೆಯಾಗುತ್ತಿದೆ. ಹಸುಗಳಲ್ಲಿ ಸಂತಾನೋತ್ಪತ್ತಿ ಕಡಿಮೆಯಾದಾಗ ಹೈನುಗಾರಿಕೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ ಎಂಬುದು ಅನೇಕ ಹೈನುಗಾರರ ಅಳಲು. ‘ಜಾನುವಾರುಗಳಿಗೆ ಸಮತೋಲನ ಆಹಾರ ನೀಡುವುದು ಅತ್ಯಂತ ಮಹತ್ವದ್ದು. ಪಶು ಆಹಾರವೊಂದನ್ನೇ ಮುಖ್ಯ ಆಹಾರವಾಗಿ ನೀಡಿದರೆ ಬೊಜ್ಜು ಬೆಳೆಯುವ ಸಾಧ್ಯತೆ ಇರುತ್ತದೆ. ಸಮತೋಲಿತ ಪಶು ಆಹಾರ ಜತೆಗೆ ಒಣಹುಲ್ಲು ಹಸಿರು ಹುಲ್ಲು ನೀಡಬೇಕು. ಕರಾವಳಿಯಲ್ಲಿ ಅತ್ಯಧಿಕ ಮಳೆಯಾಗುವ ಕಾರಣ ಇಲ್ಲಿನ ಮಣ್ಣಿನಲ್ಲಿ ಪೌಷ್ಟಿಕಾಂಶ ಕಡಿಮೆ. ಹೀಗಾಗಿ ಹುಲ್ಲಿನಲ್ಲಿಯೂ ಖನಿಜಾಂಶ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಹಸುಗಳಿಗೆ ಲವಣ ಮಿಶ್ರಣವನ್ನು ಕಾಲಕಾಲಕ್ಕೆ ನೀಡಬೇಕು’ ಎಂಬುದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕ ಡಾ. ಅರುಣ್‌ಕುಮಾರ್ ಶೆಟ್ಟಿ ಅವರ ಸಲಹೆ. ‘ಸತತ ಮೂರು ಪ್ರಯತ್ನಗಳ ನಂತರವೂ ಹಸು ಗರ್ಭ ಕಟ್ಟದಿದ್ದರೆ ನುರಿತ ಪಶುವೈದ್ಯರನ್ನು ಸಂಪರ್ಕಿಸಿ ಆ ಹಸುವಿಗೆ ಚಿಕಿತ್ಸೆ ಕೊಡಿಸಬೇಕು. ಒಂದು ದನ ವರ್ಷಕ್ಕೊಂದು ಕರು ಹಾಕಿ ಹಾಲು ನೀಡಿದಾಗ ಮಾತ್ರ ಹಸು ಸಾಕಾಣಿಕೆಯಲ್ಲಿ ಲಾಭಗಳಿಸಲು ಸಾಧ್ಯ’ ಎನ್ನುತ್ತಾರೆ ಅವರು.
‘ಯುವಜನರನ್ನು ಆಕರ್ಷಿಸುವ ಯೋಜನೆ’
ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳಲ್ಲಿ ಹಾಲಿನ ಬೇಡಿಕೆ ಶೇ 25ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಹಾಲಿನ ಉತ್ಪಾದನೆಯೂ ತಗ್ಗಿದೆ. ಪ್ರಸ್ತುತ ಕೊರತೆಯಾಗುವ ಹಾಲನ್ನು ಮಂಡ್ಯ ಹಾಸನ ಭಾಗದಿಂದ ತರಿಸಿಕೊಳ್ಳಲಾಗುತ್ತಿದೆ. ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಸಹಕಾರದಿಂದ ಹೆಚ್ಚುವರಿ ಸಾಗಣೆ ವೆಚ್ಚ ಇಲ್ಲದೆ ಹಾಲನ್ನು ಬೇರೆ ಒಕ್ಕೂಟಗಳಿಂದ ತರಿಸಿಕೊಂಡು ಹಾಲಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸರಿದೂಗಿಸಲಾಗುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ್ ಶೆಟ್ಟಿ. ದನಗಳಿಗೆ ಕಾಡುವ ಚರ್ಮಗಂಟು ರೋಗ ವೈರಲ್ ಜ್ವರ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದ್ದು ಇದು ತಾತ್ಕಾಲಿಕ ತೊಂದರೆ. ಆದರೆ ಸವಾಲು ಇರುವುದು ಹೈನುಗಾರಿಕೆ ವಿಸ್ತರಣೆಯಲ್ಲಿ. ಕೃಷಿ ನಂಟಿನ ನೆಲದಲ್ಲಿ ನಳನಳಿಸಬೇಕಾಗಿದ್ದ ಹೈನುಗಾರಿಕೆ ಪೇಟೆ ವಿಸ್ತರಣೆಯಾದ ಪ್ರದೇಶಗಳಲ್ಲೆಲ್ಲ ಸೊರಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಹಾಲು ಸಂಘಗಳಿಗೆ ಹಾಲು ಹಾಕುವವರನ್ನು ಗಮನಿಸಿದರೆ 50 ವರ್ಷ ಮೀರಿದವರೇ ಹೆಚ್ಚು. ಯುವಜನರು ಹೈನೋದ್ಯಮದತ್ತ ಮುಖ ಮಾಡದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಹದಗೆಡುವ ಆತಂಕವಿದೆ. ಈ ವಿಷಯವನ್ನು ಗಂಭೀರವಾಗಿ ಯೋಚಿಸಿರುವ ಒಕ್ಕೂಟವು ದನ ಸಾಕಣೆಗೆ ಪ್ರೋತ್ಸಾಹಧನ ಹಸಿರು ಹುಲ್ಲು ಪ್ರದೇಶ ವಿಸ್ತರಣೆ ಯುವಜನರನ್ನು ಆಕರ್ಷಿಸುವ ಇನ್ನಷ್ಟು ಯೋಜನೆಗಳನ್ನು ರೂಪಿಸಲು ಮುಂದಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಾಲು ಒಕ್ಕೂಟದ ಸದಸ್ಯರಿಗೆ ಲಭ್ಯವಿರುವ ಪ್ರಮುಖ ಯೋಜನೆಗಳು

  • ಕರುಗಳ ಪಶು ಆಹಾರದ ಮೂಲ ಬೆಲೆಯ ಮೇಲೆ ಶೇ 40ರಷ್ಟು ಅನುದಾನ

  • ಮಿಶ್ರತಳಿ ಹೆಣ್ಣು ಕರು ಸಾಕಣೆಗೆ ಪ್ರೋತ್ಸಾಹಧನ

  • ಮಿನಿ ಡೇರಿ ಯೋಜನೆಯಡಿ ರಾಸುಗಳಿಗೆ ಪಶು ಆಹಾರದಲ್ಲಿ ರಿಯಾಯಿತಿ

  • ಸ್ವಯಂಚಾಲಿತ ಹಾಲು ಕರೆಯುವ ಯಂತ್ರಕ್ಕೆ ಅನುದಾನ

  • ರಬ್ಬರ್ ಮ್ಯಾಟ್ ಖರೀದಿಗೆ ಅನುದಾನ

  • ಹುಲ್ಲು ಕತ್ತರಿಸುವ ಯಂತ್ರ ಖರೀದಿಗೆ ಪ್ರೋತ್ಸಾಹಧನ

  • ಹಸಿರು ಮೇವಿನ ತಾಕು ಸ್ಥಾಪನೆಗೆ ನೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.