ADVERTISEMENT

ನಷ್ಟದ ಭೀತಿಯಲ್ಲಿ ದ.ಕ. ಹಾಲು ಒಕ್ಕೂಟ

ಕೋವಿಡ್ ಸಂಕಷ್ಟ: 3 ತಿಂಗಳಲ್ಲಿ ಹಾಲು ವಹಿವಾಟು ₹30 ಕೋಟಿ ಕಡಿಮೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 13:49 IST
Last Updated 20 ಜೂನ್ 2020, 13:49 IST

ಮಂಗಳೂರು: ಕೋವಿಡ್–19 ಸಂಕಷ್ಟದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಹಿವಾಟಿಗೂ ತೊಂದರೆ ಉಂಟಾಗಿದೆ. ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿದ್ದು, ನಿತ್ಯ 5 ಲಕ್ಷ ಕೆ.ಜಿ.ಗೂ ಅಧಿಕ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಕರ್ನಾಟಕ ಹಾಲು ಮಹಾಮಂಡಳಿಗೆ ನಿತ್ಯ 86.73 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ 25ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗುತ್ತಿದ್ದು, ನಿತ್ಯ 47.19 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ.

ಮಾರ್ಚ್‌ನಲ್ಲಿ ಪ್ರತಿ ಕೆ.ಜಿ. ಕೆನೆರಹಿತ ಹಾಲಿನ ಪುಡಿಗೆ ₹340 ದರ ಇದ್ದು, ಸದ್ಯಕ್ಕೆ ದೇಶದಾದ್ಯಂತ ಹಾಲಿನ ಹುಡಿ ದಾಸ್ತಾನು ಹೆಚ್ಚಳದಿಂದಾಗಿ ಪ್ರತಿ ಕೆಜಿಗೆ ₹160ಕ್ಕೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಬೆಣ್ಣೆಯ ದರವೂ ಗಣನೀಯ ಇಳಿಕೆಯಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಒಕ್ಕೂಟದಲ್ಲಿ 9.5 ಲಕ್ಷ ಕೆ.ಜಿ. ಹೆಚ್ಚುವರಿ ಬೆಣ್ಣೆ ದಾಸ್ತಾನು ಉಳಿಕೆಯಾಗಲಿದೆ.

ADVERTISEMENT

ಕೋವಿಡ್–19ರ ಪರಿಣಾಮದಿಂದ 2020-21ನೇ ಸಾಲಿನ ಪ್ರಥಮ ಮೂರು ತಿಂಗಳಲ್ಲಿ ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸುಮಾರು ಶೇ 25ರಷ್ಟು ಕುಸಿತವಾಗಿದ್ದು, ವಹಿವಾಟು ₹ 30 ಕೋಟಿ ಕಡಿಮೆಯಾಗಿದೆ.

ಮಾರುಕಟ್ಟೆಯಲ್ಲಿ ಹೋಟೆಲ್, ರೆಸ್ಟೊರೆಂಟ್, ಕ್ಯಾಂಟೀನ್ ಮತ್ತು ವಿದ್ಯಾ-ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಅಲ್ಲದೇ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರವಾಸೋದ್ಯಮ ಸ್ಥಗಿತಗೊಂಡಿದ್ದು, ಮಾರುಕಟ್ಟೆ ವಹಿವಾಟು ಏಳು ವರ್ಷಗಳ ಹಿಂದಿನ ಮಾರಾಟಕ್ಕಿಂತಲೂ ಕಡಿಮೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ತಿಳಿಸಿದ್ದಾರೆ.

ಜೂನ್‌ ತಿಂಗಳಲ್ಲಿ ನಿತ್ಯ 1.22 ಲಕ್ಷ ಕೆ.ಜಿ. ಹಾಲನ್ನು ಹಾಲಿನ ಹುಡಿ ಪರಿವರ್ತನೆಗೆ ಕಳುಹಿಸಲಾಗುತ್ತಿದ್ದು, ಪ್ರತಿ ಕೆ.ಜಿ. ಹಾಲಿನ ಹುಡಿ ಪರಿವರ್ತನೆಗೆ ₹11.35ರಂತೆ ನಷ್ಟವಾಗಲಿದೆ. ಇದೇ ಸೆಪ್ಟೆಂಬರ್ ಅಂತ್ಯಕ್ಕೆ ಅಂದಾಜು 1.50 ಕೋಟಿ ಕೆ.ಜಿ. ಹಾಲಿನ ಹುಡಿ ಒಕ್ಕೂಟದಲ್ಲಿ ದಾಸ್ತಾನು ಉಳಿಯಲಿದೆ.

ಕರ್ನಾಟಕ ಹಾಲು ಮಾರಾಟ ಮಹಾಮಂಡಳಿಯ ದಾಸ್ತಾನು ಮಳಿಗೆಗಳಲ್ಲಿ ಪರಿವರ್ತಿತ ಹಾಲಿನ ಪುಡಿ ಮತ್ತು ಬೆಣ್ಣೆ ದಾಸ್ತಾನು ಹೆಚ್ಚಾಗಿದ್ದು, ಶೇಖರಿಸಲು ಸಾಧ್ಯವಾಗದೇ, ಖಾಸಗಿ ಮಳಿಗೆಗಳಲ್ಲಿ ದುಬಾರಿ ಬಾಡಿಗೆ ನೀಡಿ ದಾಸ್ತಾನು ಮಾಡಬೇಕಾಗಿದೆ. ಹಾಲಿನ ಹುಡಿ ಮತ್ತು ಬೆಣ್ಣೆ ದಾಸ್ತಾನು ಮಾಡುವುದರಿಂದ ಒಕ್ಕೂಟದ ₹ 30 ಕೋಟಿ ನಗದು ಹರಿವಿಗೆ ತಡೆಯುಂಟಾಗಲಿದ್ದು, ದುಡಿಯುವ ಬಂಡವಾಳದ ಕೊರತೆಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ಪ್ರಾರಂಭ ವಿಳಂಬ ಆಗುತ್ತಿರುವುದರಿಂದ, ಕೆನೆಭರಿತ ಹಾಲಿನ ಪುಡಿ ಮಾರಾಟವೂ ಸಾಧ್ಯವಾಗದೇ ಹಾಲಿನ ಹುಡಿ ದಾಸ್ತಾನು ಉಳಿಯುತ್ತಿದೆ ಎಂದು ಹೇಳಿದ್ದಾರೆ.

ಹಾಲು ಖರೀದಿ ದರ ₹1 ಇಳಿಕೆ

ರಾಜ್ಯದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಉತ್ಪಾದಕರಿಗೆ ಗರಿಷ್ಠ ದರವನ್ನು ಪಾವತಿಸುವ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದ್ದು, ಸದ್ಯದ ಸಮಸ್ಯೆಯನ್ನು ಪರಿಹರಿಸಲು ಇದೇ 21ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ₹ 1 ಕಡಿಮೆ ಮಾಡಲಾಗಿದೆ.

ಹಾಲು ಉತ್ಪಾದಕರ ಹಾಲಿಗೆ ನಿರಂತರ ಮಾರುಕಟ್ಟೆ ಕಾಯ್ದುಕೊಂಡು ಬರಲು ಹಾಗೂ ಹಾಲು ಉತ್ಪಾದಕರ ಸಹಕಾರದಿಂದ ಒಕ್ಕೂಟಕ್ಕೆ ಉಂಟಾಗುವ ಆರ್ಥಿಕ ನಷ್ಟವನ್ನು ‘ಅಮುಲ್’ ಸಂಸ್ಥೆ ಅನುಸರಿಸುವ ಮಾರ್ಗದಲ್ಲಿ ಸರಿದೂಗಿಸಿಕೊಳ್ಳುವ ಅನಿವಾರ್ಯತೆಯಿದೆ. ಪ್ರಸ್ತುತ ಕೋವಿಡ್-19 ಸಮಸ್ಯೆಯನ್ನು ನಿರ್ವಹಿಸಲು ರಾಜ್ಯದ ಹಾಲು ಒಕ್ಕೂಟಗಳಲ್ಲಿ ಪ್ರತಿ ಲೀಟರ್‌ಗೆ ಕನಿಷ್ಠ ₹ 2.20 ರಿಂದ ₹ 4.70 ರವರೆಗೆ ಖರೀದಿ ದರವನ್ನು ಕಡಿಮೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ವಾರ್ಷಿಕ ₹ 120 ಕೋಟಿ ವಹಿವಾಟು ಕಡಿಮೆಯಾಗಲಿದೆ

ಇದೇ ಪರಿಸ್ಥಿತಿ ಮುಂದುವರಿದಲ್ಲಿ ವಾರ್ಷಿಕ ಅಂದಾಜು ₹ 120 ಕೋಟಿ ವಹಿವಾಟು ಕಡಿಮೆಯಾಗಲಿದ್ದು, ಒಕ್ಕೂಟಕ್ಕೆ ಅಂದಾಜು ₹ 20 ಕೋಟಿ ನಷ್ಟವಾಗುವ ಸಾಧ್ಯತೆಯಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.