ADVERTISEMENT

ಅಕ್ರಮ ದಂಧೆಗೆ ಬಿಜೆಪಿ ಸರ್ಕಾರದ ಕೃಪಾಕಟಾಕ್ಷ

ಮಾಜಿ ಸಚಿವ ರಮಾನಾಥ ರೈ ಆರೋಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:40 IST
Last Updated 4 ಡಿಸೆಂಬರ್ 2021, 2:40 IST
ಬಿ.ರಮಾನಾಥ ರೈ
ಬಿ.ರಮಾನಾಥ ರೈ   

ಬಂಟ್ವಾಳ: ‘ತಾಲ್ಲೂಕಿನ ವಿವಿಧೆಡೆ ಮರಳು ಗಣಿಗಾರಿಕೆ ಮತ್ತು ಜುಗಾರಿ ದಂಧೆ ಮತ್ತಿತರ ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಆಡಳಿತ ಪಕ್ಷ ಬಿಜೆಪಿ ಕೃಪಾಕಟಾಕ್ಷ ಇದೆ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಇಲ್ಲಿನ ಮೆಲ್ಕಾರ್, ಬಿ.ಸಿ.ರೋಡು, ಬಂಟ್ವಾಳ ಬೈಪಾಸ್, ಪುಂಜಾಲಕಟ್ಟೆ, ಕೈಕಂಬ ಸಹಿತ ಬಹುತೇಕ ಕಡೆಗಳಲ್ಲಿ ಅಕ್ರಮ ಜುಗಾರಿ ಅಡ್ಡೆ ಇವೆ. ಇವುಗಳಿಗೆ ಬಿಜೆಪಿ ಕೃಪಾಕಟಾಕ್ಷ ಇರುವುದರಿಂದ ಪೊಲೀಸ್ ಇಲಾಖೆ ಕೂಡ ಮೌನವಾಗಿದೆ ಎಂದು ಆರೋಪಿಸಿದರು.

ಜುಗಾರಿ ದಂಧೆಗೆ ಮನೆಯ ಹೆಣ್ಣುಮಕ್ಕಳು ಚಿನ್ನಾಭರಣ ಅಡವಿಟ್ಟು ಮನೆಯಲ್ಲಿ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಇನ್ನೊಂದೆಡೆ ಅಕ್ರಮ ಮರಳು ಗಣಿಗಾರಿಕೆ ಕೂಡ ರಾಜಾರೋಷವಾಗಿ ನಡೆಯುತ್ತಿದೆ. ಇಲ್ಲಿನ ಕಡೆಶಿವಾಲಯ, ಸರಪಾಡಿ, ಆರಿಕಲ್ಲು, ಜಡ್ತಿಲ, ಸೇರಾ ಮತ್ತಿತರ ಕಡೆಗಳಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ. ಇದು ಕೂಡ ಬಿಜೆಪಿ ಬೆಂಬಲದಿಂದಲೇ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ವೆಂಕಪ್ಪ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.