ADVERTISEMENT

ಮೂರ್ಛೆರೋಗದ ಬಗ್ಗೆ ಜಾಗೃತಿ ಅಗತ್ಯ

ಮೂಢನಂಬಿಕೆ ಬಿಡುವಂತೆ ಮಂಗಳೂರಿನ ನರರೋಗ ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 15:46 IST
Last Updated 21 ಆಗಸ್ಟ್ 2019, 15:46 IST

ಮಂಗಳೂರು: ಮೂರ್ಛೆರೋಗದ ಕುರಿತು ಸಮಾಜದಲ್ಲಿರುವ ಮೂಢನಂಬಿಕೆಗಳು ಮತ್ತು ಕೀಳರಿಮೆಯ ಭಾವನೆಯಿಂದಾಗಿ ರೋಗಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನರರೋಗ ತಜ್ಞ ಡಾ.ಡಿ.ಶಿವಾನಂದ ಪೈ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 10,000 ಮಂದಿ ಮೂರ್ಛೆರೋಗದಿಂದ ಬಳಲುತ್ತಿದ್ದಾರೆ. ಅವರಲ್ಲಿ ಕೆಲವೇ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಢನಂಬಿಕೆಗಳು ಮತ್ತು ಈ ರೋಗದ ಕುರಿತು ಇರುವ ಕೀಳರಿಮೆಗಳೇ ಜನರು ವೈದ್ಯಕೀಯ ಚಿಕಿತ್ಸೆಯಿಂದ ದೂರ ಉಳಿಯಲು ಕಾರಣ’ ಎಂದರು.

ದೇಶದಲ್ಲಿ 27 ಲಕ್ಷ ಮಹಿಳೆಯರು ಮೂರ್ಛೆರೋಗದ ಸಮಸ್ಯೆ ಹೊಂದಿದ್ದಾರೆ. ಅವರಲ್ಲಿ ಶೇಕಡ 52ರಷ್ಟು ರೋಗಿಗಳು ಪುನರುತ್ಪಾದಕ (15ರಿಂದ 49 ವರ್ಷ) ಶಕ್ತಿಯುಳ್ಳವರು. ಮಹಿಳೆಯರಲ್ಲಿ ಈ ರೋಗದ ಕುರಿತು ಜಾಗೃತಿ ಮೂಡಿಸುವುದು ಮಾತ್ರವಲ್ಲ, ಅವರಿಗೆ ಇರುವ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿಭಾಯಿಸುವಾಗ ಅದರಿಂದ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವುದನ್ನೂ ಕಲಿಸಬೇಕು. ಲಿಂಗ ತಾರತಮ್ಯದ ಫಲವಾಗಿ ಬರುವ ಕೀಳರಿಮೆಯಿಂದ ಜರ್ಝರಿತರಾಗದಂತೆಯೂ ತಡೆಯಬೇಕು ಎಂದು ಹೇಳಿದರು.

ADVERTISEMENT

ಕಸ್ತೂರಬಾ ವೈದ್ಯಕೀಯ ಕಾಲೇಜು ನಡೆಸಿದ ಅಧ್ಯಯನದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 66.1ರಷ್ಟು ಮೂರ್ಛೆ ರೋಗಿಗಳು ತಮಗಿರುವ ರೋಗದ ಮಾಹಿತಿಯನ್ನು ಗೋಪ್ಯವಾಗಿಡಲು ಬಯಸುತ್ತಾರೆ. ಅದು ಒಂದು ಕಳಂಕ ಎಂದು ಭಾವಿಸಿದ್ದಾರೆ. ರೋಗದ ಕುರಿತು ಮಾಹಿತಿ ಬಹಿರಂಗವಾದ ಬಳಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಗುಂಪುಗಳೊಂದಿಗೆ ಬೆರೆತಾಗ ಅಥವಾ ಸಂಬಂಧಿಗಳ ಮನೆಗೆ ಹೋದಾಗ ತಮ್ಮನ್ನು ಕಡೆಗಣಿಸಿ ನೋಡುತ್ತಾರೆ ಎಂಬ ಭಾವನೆ ಹೊಂದಿದ್ದಾರೆ. ಮಧ್ಯ ವಯಸ್ಕರಲ್ಲಿ ಇಂತಹ ಭಾವನೆಗಳು ಹೆಚ್ಚಾಗಿವೆ ಎಂದು ವಿವರಿಸಿದರು.

ಜಾಗೃತಿ ಮತ್ತು ರೋಗಿಗಳಿಗೆ ಶಕ್ತಿ ತುಂಬುವ ಮೂಲಕ ಮೂಢನಂಬಿಕೆಗಳು, ಕೀಳರಿಮೆಯನ್ನು ತೊಲಗಿಸಲು ಸಾಧ್ಯವಿದೆ. ಮೂರ್ಛೆರೋಗಿಗಳು ಸಕಾಲಕ್ಕೆ ವೈದ್ಯರನ್ನು ಭೇಟಿ ಮಾಡುವುದು, ನಿಯಮಿತವಾಗಿ ಔಷಧಿ ಸೇವಿಸುವುದು ಮತ್ತು ಅಪಸ್ಮಾರ ಬಾಧಿಸಿದ ಅವಧಿಯನ್ನು ದಾಖಲಿಸಿ ಇಟ್ಟುಕೊಳ್ಳುವ ಮೂಲಕ ಇತರರ ಅವಲಂಬನೆ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಅಬ್ಬಾಟ್‌ ಫಾರ್ಮಾಸ್ಯುಟಿಕಲ್‌ ಡಿವಿಷನ್‌ನ ಭಾರತದ ಸಹ ವೈದ್ಯಕೀಯ ನಿರ್ದೇಶಕ ಡಾ.ಜೆ.ಕರಣ್‌ಕುಮಾರ್‌ ಮಾತನಾಡಿ, ‘ಮೂರ್ಛೆರೋಗ ಒಂದು ಆರೋಗ್ಯದ ಸಮಸ್ಯೆ. ಸರಿಯಾಗಿ ನಿರ್ವಹಿಸಿದರೆ ರೋಗಿಯು ಸಾಮಾನ್ಯ ಜೀವನ ನಡೆಸಲು ಸಾಧ್ಯವಿದೆ. ಆದರೆ, ಭಾರತದಲ್ಲಿ ಈ ಕುರಿತು ಅಪನಂಬಿಕೆಗಳು ಜಾಸ್ತಿ ಇವೆ. ಅಧ್ಯಯನದ ಪ್ರಕಾರ ಮೂರ್ಛೆರೋಗಿಗಳ ಪೈಕಿ ನಗರದ ಪ್ರದೇಶದ ಶೇ 60ರಷ್ಟು ಮತ್ತು ಗ್ರಾಮೀಣ ಪ್ರದೇಶದ ಶೇ 10ರಷ್ಟು ಮಂದಿ ಮಾತ್ರ ವೈದ್ಯರನ್ನು ಭೇಟಿಮಾಡಿ, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

ಶೇ 80ರಷ್ಟು ರೋಗಿಗಳು ಚಿಕಿತ್ಸೆಯನ್ನೇ ಪಡೆಯುವುದಿಲ್ಲ. ಮೂರ್ಛೆರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಕುಟುಂಬದಿಂದ ಸರಿಯಾದ ಸಹಾಯ ದೊರಕದೇ ಇರುವುದು ಇದಕ್ಕೆ ಕಾರಣ ಎಂದು ಹೇಳಿದರು.

ಫಾದರ್‌ ಮುಲ್ಲರ್ಸ್‌ ಕಾಲೇಜಿನ ನರರೋಗ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪವನ್‌ ರಾಜ್‌ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3,500 ಮಕ್ಕಳು ಮೂರ್ಛರೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಸರಿಯಾದ ಚಿಕಿತ್ಸೆಯ ಅಗತ್ಯವಿದೆ. ಮಕ್ಕಳ ಕುಟುಂಬಗಳ ಬೆಂಬಲ ಇದಕ್ಕೆ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.