ADVERTISEMENT

ಮನರೇಗಾ ಹೆಸರು,ಸ್ವರೂಪ ಬದಲಾವಣೆಗೆ ವಿರೋಧ: ಕಾಂಗ್ರೆಸ್‌ನಿಂದ 100ಕಿ.ಮೀ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:16 IST
Last Updated 22 ಜನವರಿ 2026, 6:16 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಹೆಸರು ಮತ್ತು ಮೂಲ ಸ್ವರೂಪ ಬದಲಾವಣೆ ಮಾಡಿರುವ ಕೇಂದ್ರದ ಎನ್‌ಡಿಎ ನೇತೃತ್ವದ ಸರ್ಕಾರದ ಕ್ರಮವನ್ನು ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಮೂಲ್ಕಿವರೆಗೆ (ಒಂದು ಗಡಿಯಿಂದ ಇನ್ನೊಂದು ಗಡಿವರೆಗೆ) 100 ಕಿ.ಮೀ ಪಾದಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕೆ. ಹೇಳಿದರು. 

ನರೇಗಾ ಕಾಯ್ದೆಯ ಮೂಲ ಸ್ವರೂಪ ಹಾಗೂ ಹೆಸರನ್ನು ಉಳಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ರಾಜಾಜಿ ಪಾರ್ಕ್‌ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಬುಧವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ADVERTISEMENT

ನರೇಗಾ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಎನ್‌ಡಿಎ ಸರ್ಕಾರವು ಗಾಂಧಿಯನ್ನು ಎರಡನೇ ಬಾರಿಗೆ ಕೊಲೆ ಮಾಡಿದೆ. ಇದನ್ನು ಖಂಡಿಸಿ, ಫೆಬ್ರುವರಿ 9ರಿಂದ 12ರವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಲಿದ್ದಾರೆ ಎಂದರು. 

ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಮಾತನಾಡಿ, ‘ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಕಾಯ್ದೆಯ ಸ್ವರೂಪ ಬದಲಿಸಿ, ರಾಜ್ಯಗಳಿಗೆ ಆರ್ಥಿಕ ಹೊರೆಯಾಗುವಂತೆ ಮರು ರಚಿಸಲಾಗಿದೆ. ಇದರಿಂದ ರಾಜ್ಯದ, ಕಾರ್ಯಕ್ರಮ ಅನುಷ್ಠಾನಗೊಳಿಸುವ ಗ್ರಾಮ ಪಂಚಾಯಿತಿಗಳ ಸ್ವಾಯತ್ತತೆಯ ಪ್ರಶ್ನೆ ಎದುರಾಗಿದೆ’ ಎಂದರು. 

‘ಆಹಾರ ಸುರಕ್ಷೆ, ಉದ್ಯೋಗ ಖಾತ್ರಿ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಸೇರಿದಂತೆ ಅನೇಕ ಜನೋಪಯೋಗಿ ಕಾಯ್ದೆಗಳನ್ನು ಯುಪಿಎ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದೆ. ಕಾಂಗ್ರೆಸ್‌ನಿಂದ ಬಡವರು, ಪರಿಶಿಷ್ಟರು, ಅಲ್ಪಸಂಖ್ಯಾತರು ಯಾರಿಗೂ ತೊಂದರೆಯಾಗಿಲ್ಲ. ತೊಂದರೆ ಆಗಿದ್ದಿದ್ದರೆ ಅದು ಭೂ ಮಾಲೀಕರು, ಬಂಡವಾಳಶಾಹಿಗಳಿಗೆ ಮಾತ್ರ. ಬಿಜೆಪಿಗರಿಗೆ ಉತ್ತಮ ಕಾರ್ಯಕ್ರಮ ತರಲು ಆಗದಿದ್ದರೂ, ಅವರು ಪ್ರಚಾರದಲ್ಲಿ ಮುಂದಿದ್ದಾರೆ’ ಎಂದು ಹೇಳಿದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ‘18 ಕೋಟಿ ಜನರಿಗೆ ಉದ್ಯೋಗ ನೀಡಿರುವ ನರೇಗಾ ಯೋಜನೆಯ ನಿಯಮಾವಳಿ ಬದಲಾಯಿಸಿರುವ ಕೇಂದ್ರ ಸರ್ಕಾರ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ಭಾವನಾತ್ಮಕವಾಗಿ ವಿಬಿ– ಜಿ ರಾಮ್‌ ಜಿ ಎಂದು ಬದಲಿಸಿ, ಈ ಬಗ್ಗೆ ಮಾತನಾಡಿದರೆ ಕಾಂಗ್ರೆಸ್‌ನವರು ರಾಮನ ವಿರುದ್ಧ ಎಂದು ಬಿಂಬಿಸುವ ಪಿತೂರಿ ಬಿಜೆಪಿಯವರದ್ದಾಗಿದೆ’ ಎಂದರು. 

ಈಗಾಗಲೇ ಆರು ರಾಜ್ಯಗಳು ಈ ಯೋಜನೆ ಜಾರಿಗೆ ತರುವುದಿಲ್ಲವೆಂದು ಹೇಳಿವೆ. ನಾವು ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವುದಾದರೆ, ನರೇಗಾ ಹೆಸರಿನಲ್ಲೇ ಜಾರಿಗೊಳಿಸುತ್ತೇವೆ ಎಂದರು. 

ಪಕ್ಷದ ಪ್ರಮುಖರಾದ ಜೆ.ಆರ್.ಲೋಬೊ, ಮಮತಾ ಗಟ್ಟಿ, ಶಾಲೆಟ್ ಪಿಂಟೊ, ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಶಾಹುಲ್ ಹಮೀದ್, ಎಂ.ಎಸ್.ಮೊಹಮ್ಮದ್, ಅಶ್ರಫ್, ಅಪ್ಪಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.