ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಒಂಭತ್ತನೇ ರೋಗಿಯೂ ಗುಣಮುಖ

ಮೂವರು ಕೋವಿಡ್‌–19 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 14:25 IST
Last Updated 14 ಏಪ್ರಿಲ್ 2020, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ತಗುಲಿದ್ದ 12 ಜನರ ಪೈಕಿ ಒಂಭತ್ತನೇ ರೋಗಿ ಮಂಗಳವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈಗ ಮೂವರು ರೋಗಿಗಳು ಮಾತ್ರ ಆಸ್ಪತ್ರೆಯಲ್ಲಿ ಉಳಿದಿದ್ದಾರೆ.

‘ದುಬೈನಿಂದ ಹೊರಟು ಮಾರ್ಚ್‌ 21ರಂದು ‍ಪುತ್ತೂರು ತಲುಪಿದ್ದ 49 ವರ್ಷದ ಪುರುಷನಲ್ಲಿ ಕೋವಿಡ್‌–19 ಸೋಂಕು ಇರುವುದು ಏಪ್ರಿಲ್‌ 1ರಂದು ದೃಢಪಟ್ಟಿತ್ತು. ಅದೇ ದಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿತ್ತು. ಏಪ್ರಿಲ್‌ 12 ಮತ್ತು 13ರಂದು ರೋಗಿಯ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಎರಡೂ ವರದಿಗಳು ನೆಗೆಟಿವ್‌ ಬಂದಿದ್ದು, ಗುಣಮುಖರಾದ ವ್ಯಕ್ತಿಯನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

21 ಮಂದಿ ನಿಗಾ ಕೇಂದ್ರಕ್ಕೆ: ಜಿಲ್ಲೆಯ ಜ್ವರ ಚಿಕಿತ್ಸಾ ಕ್ಲಿನಿಕ್‌ಗಳಲ್ಲಿ ಈವರೆಗೆ 201 ಜನರ ತಪಾಸಣೆ ನಡೆಸಲಾಗಿದೆ. ಸೋಂಕಿನ ಶಂಕಿತ ಲಕ್ಷಣಗಳ ಕಾರಣದಿಂದ 21 ಜನರನ್ನು ಮಂಗಳವಾರ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು, ಎಲ್ಲರನ್ನೂ ನಿಗಾ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ವಿದೇಶಗಳಿಂದ ಬಂದವರಲ್ಲಿ 4,588 ಜನರು ಮಂಗಳವಾರಕ್ಕೆ 28 ದಿನಗಳ ಹೋಂ ಕ್ವಾರಂಟೈನ್‌ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 1,485 ಜನರು ಮಾತ್ರ ಕ್ವಾರಂಟೈನ್‌ನಲ್ಲಿ ಉಳಿದಿದ್ದಾರೆ. ಇಎಸ್‌ಐ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ 24 ಜನರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

156 ಮಾದರಿ ಪರೀಕ್ಷೆಗೆ: ಕೋವಿಡ್‌–19 ಸೋಂಕು ತಗುಲಿರುವ ತಬ್ಲೀಗ್‌ ಜಮಾತ್‌ನ ಸದಸ್ಯ ಓಡಾಡಿದ್ದ ಉಳ್ಳಾಲದ ಚೆಂಬುಗುಡ್ಡೆಯಲ್ಲಿ ಸೋಮವಾರ ಮತ್ತು ಮಂಗಳವಾರ ಸಾಮೂಹಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವೂ ಸೇರಿದಂತೆ ಒಟ್ಟು 156 ಮಾದರಿಗಳನ್ನು ಮಂಗಳವಾರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಈ ಹಿಂದೆ ಕಳುಹಿಸಿದ್ದ 12 ಮಾದರಿಗಳ ವರದಿಗಳು ಮಂಗಳವಾರ ಬಂದಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ. ಒಟ್ಟು 168 ಮಾದರಿಗಳ ವರದಿಗಳು ಬರಬೇಕಿದೆ. ಈವರೆಗೆ ಜಿಲ್ಲೆಯಲ್ಲಿ 636 ಮಾದರಿಗಳನ್ನು ಸಂಗ್ರಹಿಸಿದ್ದು, 468 ಮಾದರಿಗಳಿಗೆ ಸಂಬಂಧಿಸಿದ ವರದಿಗಳು ಬಂದಿವೆ. 456 ಜನರಲ್ಲಿ ಸೋಂಕು ಇಲ್ಲ ಎಂಬ ವರದಿಗಳು ಬಂದಿದ್ದರೆ, 12 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.