ADVERTISEMENT

ಇನ್ನೂ ವೇಗ ಪಡೆದಿಲ್ಲ ಮುನ್ನೆಚ್ಚರಿಕಾ ಡೋಸ್‌ ವಿತರಣೆ

ಕೋವಿಡ್‌: ಜಿಲ್ಲೆಯಲ್ಲಿ ನಿತ್ಯ 15 ರಿಂದ 20 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 13:27 IST
Last Updated 8 ಆಗಸ್ಟ್ 2022, 13:27 IST

ಮಂಗಳೂರು: ಕೋವಿಡ್‌ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್‌ಗಳ ವಿತರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಶೇ 100ರಷ್ಟು ಗುರಿ ಸಾಧನೆ ಮಾಡಿದೆ. ಆದರೆ 18ರೊಂದ 59 ವರ್ಷದೊಳಗಿನ ಫಲಾನುಭವಿಗಳಿಗೆ ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕಾ ಡೋಸ್‌ ವಿತರಣೆಯು ಜಿಲ್ಲೆಯಲ್ಲಿ ಇನ್ನೂ ವೇಗ ಪಡೆದಿಲ್ಲ.

‘ಕೋವಿಡ್‌ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ ಎಂಬ ಭಾವನೆ ಜನರಲ್ಲಿ ಮೂಡಿದ್ದು, ಮುನ್ನಚ್ಚರಿಕಾ ಡೋಸ್‌ ಪಡೆಯಲು ಸಾರ್ವಜನಿಕರು ಅಷ್ಟಾಗಿ ಮುಂದೆ ಬರುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಕಿಶೋರ್‌ ಕುಮಾರ್‌ ತಿಳಿಸಿದರು.

‘ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಮುನ್ನೆಚ್ಚರಿಕಾ ಡೋಸನ್ನು ಉಚಿತವಾಗಿ ವಿತರಿಸಲಾಗುತ್ತದೆ. ಫಲಾನುಭವಿಯು ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದರೆ, ಮನೆಗೇ ತೆರಳಿ ಮುನ್ನೆಚ್ಚರಿಕಾ ಡೋಸ್‌ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ 60 ವರ್ಷದ ಮೇಲಿನವರಲ್ಲಿ ಶೇ 37.70 ರಷ್ಟು ಫಲಾನುಭವಿಗಳಿಗೆ ಇದುವರೆಗೆ ಮುನ್ನೆಚ್ಚರಿಕ ಡೋಸ್‌ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತರಲ್ಲಿ ಶೇ 60.90ರಷ್ಟು ಹಾಗೂ ಆರೋಗ್ಯ ಕಾರ್ಯಕರ್ತರಲ್ಲಿ ಶೇ 68ರಷ್ಟು ಮಂದಿ ಮುನ್ನೆಚ್ಚರಿಕಾ ಡೋಸ್‌ ಪಡೆದಿದ್ದಾರೆ. 18 ವರ್ಷದಿಂದ 59 ವರ್ಷದೊಳಗಿನವರಲ್ಲಿ ಶೇ 9.5 ರಷ್ಟು ಮಂದಿ ಮಾತ್ರ ಪಡೆದಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಈಗಲೂ ನಿತ್ಯ 15 ರಿಂದ 20 ಕೋವಿಡ್‌ ಪ‍್ರಕರಣಗಳು ಪತ್ತೆಯಾಗುತ್ತಿವೆ. ಸೋಂಕು ಪತ್ತೆ ದರವು ಶೇ 1.78ರಷ್ಟಿದೆ. ಸೋಂಕಿತರಲ್ಲಿ ಹೆಚ್ಚಿನವರು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಂಕು ಲಕ್ಷಣಗಳು ಹಿಂದನಷ್ಟು ತೀವ್ರವಾಗಿ ಕಂಡುಬರುತ್ತಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.