ಮಂಗಳೂರು: ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿ ನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಅನೇಕ ಉತ್ಪನ್ನಗಳ ಬೆಲೆ ಇಳಿಕೆಗೆ ಅನುಕೂಲಕರ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಸಂಭ್ರಮಾಚರಣೆ ನಡೆಯಿತು.
ನಗರದಲ್ಲಿರುವ ಜಿಲ್ಲಾ ಕಚೇರಿ ಎದುರು ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಖುಷಿ ವ್ಯಕ್ತಪಡಿಸಿದರು. ಪರಸ್ಪರ ಸಿಹಿ ಹಂಚಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜೈಕಾರ ಕೂಗಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಜಿಎಸ್‌ಟಿಯಲ್ಲಿ ಹಲವು ವಸ್ತುಗಳ ತೆರಿಗೆ ಕಡಿಮೆ ಮಾಡುವುದರ ಮೂಲಕ ಕೇಂದ್ರ ಸರ್ಕಾರ ನವರಾತ್ರಿಯ ಉಡುಗೊರೆ ನೀಡಿದೆ. ಇದರಿಂದ ದೇಶದ ಶೇ 99ರಷ್ಟು ಜನರಿಗೆ ಪ್ರಯೋಜನವಾಗಲಿದೆ. ಪ್ರತಿ ಕುಟುಂಬ ತಿಂಗಳಿಗೆ ₹ 2 ಸಾವಿರದಷ್ಟು ಉಳಿಸಲು ಇದು ಸಹಕಾರಿಯಾಗಲಿದೆ. ಮುಂದಿನ ಒಂದು ವಾರ ಅಂಗಡಿ, ಮಾರುಕಟ್ಟೆಗಳಲ್ಲಿ ಉಳಿತಾಯ ಉತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.
ಜಿಎಸ್‌ಟಿ ಇಳಿಕೆಯಿಂದ ಜನರು ಸಂತೋಷಗೊಂಡಿದ್ದಾರೆ. ಉದ್ದಿಮೆದಾರರನ್ನು ಒಳಗೊಂಡ ತಂಡದ ಮೂಲಕ ಜನರಿಗೆ ಜಿಎಸ್‌ಟಿ ಇಳಿಕೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ಜಿಎಸ್‌ಟಿ ಪ್ರಮಾಣ ಇಳಿಕೆಯಿಂದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಜಿಎಸ್‌ಟಿ ಇಳಿಕೆ ನಿರ್ಧಾರವನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ವಿರೋಧಿಸಿದ್ದವು. ಆದರೆ, ಕೇಂದ್ರ ಸರ್ಕಾರ ಬಡವರ ಪರವಾಗಿ ನಿಂತು ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿ ಪೂರ್ಣಿಮಾ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ, ಹಿಂದುಳಿದವರ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಜೋಗಿ, ಮುಖಂಡರಾದ ನಿತಿನ್ ಕುಮಾರ್, ಭಾಸ್ಕರಚಂದ್ರ ಶೆಟ್ಟಿ, ಪ್ರಸನ್ನ ದರ್ಬೆ, ಜಗದೀಶ ಶೇಣವ ಭಾಗವಹಿಸಿದ್ದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 10 ದಿನ ಜಿಎಸ್‌ಟಿ ಉತ್ಸವ ಅಭಿಯಾನ ನಡೆಯಲಿದೆ. ಜಯಂತ್ ಕೋಟ್ಯಾನ್ ಶಾಂತಾರಾಮ ಶೆಟ್ಟಿ ಪ್ರಸನ್ನ ದರ್ಬೆ ಹಾಗೂ ಅಕ್ಷಯ ಆಳ್ವ ಇದರ ನೇತೃತ್ವ ವಹಿಸುವರು.-ಪ್ರೇಮಾನಂದ ಶೆಟ್ಟಿ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.