ADVERTISEMENT

ಗೋವು, ಹಿಂದೂಗಳು ವೋಟಿಗೆ ಮಾತ್ರವೇ? ರಿಷಿಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 17:07 IST
Last Updated 24 ನವೆಂಬರ್ 2020, 17:07 IST
ಅರಸೀಕೆರೆ ಕಾಳಿಕಾ ಮಠದ ರಿಷಿಕುಮಾರ ಸ್ವಾಮೀಜಿ ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಅರಸೀಕೆರೆ ಕಾಳಿಕಾ ಮಠದ ರಿಷಿಕುಮಾರ ಸ್ವಾಮೀಜಿ ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಮಂಗಳೂರು: ಹಿಂದೂ, ಗೋವುಗಳ ಹೆಸರಿನಲ್ಲಿ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ನಳಿನ್‌ ಕುಮಾರ್ ಕಟೀಲ್ ಅವರ ಕ್ಷೇತ್ರದಲ್ಲಿಯೇ ‘300 ದೇಸಿ ತಳಿಗಳಿರುವ ಕಪಿಲಾ ಪಾರ್ಕ್ ಗೋಶಾಲೆ’ಯು ತೆರವಿನ ಬೆದರಿಕೆ ಎದುರಿಸುತ್ತಿದೆ ಎಂದು ಅರಸೀಕೆರೆ ಕಾಳಿಕಾ ಮಠದ ರಿಷಿಕುಮಾರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಆಡಳಿತ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಹೇಳಿತ್ತು. ಆದರೆ, ಈಗ ಅಧಿಕಾರಿಗಳ ಮೂಲಕ ಗೋಶಾಲಾ ತೆರವಿಗೆ ಮುಂದಾಗಿದೆ. ನಳಿನ್‌ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಕೇವಲ ಚುನಾವಣೆಗೆ ಕೇಸರಿ ಶಾಲು ಹಾಕಿದರಾಯಿತೇ? ಹಿಂದೂಗಳಿಗೆ, ಗೋವುಗಳಿಗೆ ಉಂಟಾಗುವ ಅನ್ಯಾಯವನ್ನು ತಡೆಯುವುದಿಲ್ಲವೇ ? ನಿಮ್ಮ ಗೋ ಪ್ರೇಮವೇ ಭೇಷ್‌ ಭೇಷ್’ ಎಂದರು.

‘ಮರವೂರು–ಕೆಂಜಾರು ಪ್ರದೇಶದಲ್ಲಿ ಸುಮಾರು 34 ಸೆಂಟ್ಸ್‌ ಜಾಗದಲ್ಲಿ ಕಪಿಲಾ ಪಾರ್ಕ್ ಗೋಶಾಲೆ ಇದೆ. ಇದು ಸ್ಥಳೀಯರಿಂದ ಖರೀದಿಸಿದ ಜಮೀನಾಗಿದ್ದು, ಕೃಷಿಯೇತರ ಪರಿವರ್ತನೆ (ಎನ್‌ಎ) ಮಾಡಲಾಗಿದೆ. ಆದರೆ, ‘ಅದಕ್ಕೂ ಪೂರ್ವದಲ್ಲೇ ಈ ಭೂಮಿಯನ್ನು ಕೆಐಡಿಬಿಗಾಗಿ ನೋಟಿಫೈ ಮಾಡಿದ್ದು, ಈಚೆಗೆ ಕೋಸ್ಟ್‌ ಗಾರ್ಡ್‌ಗೆ ನೀಡಲಾಗಿದೆ’ ಎಂದು ಕಂದಾಯ, ಕೆಐಡಿಬಿ ಹಾಗೂ ಕೋಸ್ಟ್‌ ಗಾರ್ಡ್‌ ಹೇಳುತ್ತಿದ್ದು, ತೆರವು ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಭೂಮಿ ಮೊದಲೇ ನೋಟಿಫೈ ಆಗಿದ್ದರೆ, ಮಾರಾಟ, ಎನ್‌ಎ ಹೇಗೆ ಸಾಧ್ಯವಾಯಿತು? ಗೋಶಾಲೆಯ ಜಾಗವನ್ನೇ ತೆರವು ಮಾಡಲು ಉದ್ದೇಶಿಸುತ್ತಿರುವುದು ಯಾಕೆ?’ ಎಂದು ಕಪಿಲಾ ಪಾರ್ಕ್ ಮಾಲೀಕ ಪ್ರಕಾಶ್‌ ಶೆಟ್ಟಿ ಪ್ರಶ್ನಿಸಿದರು.

ADVERTISEMENT

‘ಗೋವುಗಳ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ’ ಎಂದು ರಾಮಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್ ಅಮೀನ್ ಉರ್ವಸ್ಟೋರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.