ADVERTISEMENT

ಗುಜರಾತ್‌ನ ಚೆಕ್‌ಪೋಸ್ಟ್‌ನಲ್ಲಿ ಸಿಲುಕಿದ ದಕ್ಷಿಣ ಕನ್ನಡದ ಯುವಕರು

ನೆರವಾಗಲು ಜಿಲ್ಲಾಧಿಕಾರಿ ಪತ್ರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 16:35 IST
Last Updated 14 ಏಪ್ರಿಲ್ 2020, 16:35 IST
ಚೆಕ್‌ಪೋಸ್ಟ್‌ನಲ್ಲಿ ಸಿಲುಕಿರುವ ಪುತ್ತೂರು ತಾಲ್ಲೂಕಿನ ಯುವಕರು
ಚೆಕ್‌ಪೋಸ್ಟ್‌ನಲ್ಲಿ ಸಿಲುಕಿರುವ ಪುತ್ತೂರು ತಾಲ್ಲೂಕಿನ ಯುವಕರು   

ಮಂಗಳೂರು: ಗುಜರಾತಿನ ರಾಜ್‌ಕೋಟ್‌ನಿಂದ ಹೊರಟಿದ್ದ ಪುತ್ತೂರಿನ ಇಬ್ಬರು ಯುವಕರು ಲಾಕ್‌ಡೌನ್‌ನಿಂದಾಗಿ ಗುಜರಾತ್-ಮಹಾರಾಷ್ಟ್ರ ಗಡಿಪ್ರದೇಶದಲ್ಲಿ ಸಿಲುಕಿದ್ದು, 22 ದಿನ ಕಾರಿನಲ್ಲೇ ಕಳೆದಿದ್ದಾರೆ. ಇವರ ಸಂಕಷ್ಟಕ್ಕೆ ಸ್ಪಂದಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಗುಜರಾತಿನ ವಲ್ಸಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆದು, ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಮಂಗಳವಾರ ಪತ್ರ ಬರೆದಿರುವ ಸಿಂಧೂ ಬಿ.ರೂಪೇಶ್‌, ವಲ್ಸಾಡ್ ಜಿಲ್ಲೆಯ ಅಂಬರ್‌ಗಾವ್ ಭಿಲಾಡ್ ತಾಲ್ಲೂಕಿನ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ಸಿಲುಕಿರುವ ಪುತ್ತೂರು ತಾಲ್ಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮುಹಮ್ಮದ್ ತಾಕೀನ್ ಮರೀಲ್ ಅವರಿಗೆ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಆಶಿಕ್ ಹುಸೈನ್ ಅಡಿಕೆ ವ್ಯಾಪಾರದ ಉದ್ದೇಶದಿಂದ ಹಾಗೂ ರಾಜ್‌ಕೋಟ್‌ನಲ್ಲಿ ಹೊಸ ಅಂಗಡಿ ತೆರೆಯುವ ಸಲುವಾಗಿ ತಿಂಗಳ ಹಿಂದೆ ಸ್ನೇಹಿತನ ಜತೆ ತೆರಳಿದ್ದರು. ಲಾಕ್‌ಡೌನ್ ಆಗುವ 2 ದಿನ ಮೊದಲು ರಾಜ್‌ಕೋಟ್‌ನಿಂದ ಕಾರಲ್ಲಿ ಹೊರಟ ಇವರು, ಗುಜರಾತಿನ ವಲ್ಸಾಡ್ ಜಿಲ್ಲೆಯ ಅಂಬರ್‌ಗಾವ್ ಭಿಲಾಡ್ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ಸಿಲುಕಿದ್ದಾರೆ. ಅತ್ತ ರಾಜ್‌ಕೋಟ್‌ಗೆ ಹೋಗಲಾರದೇ, ಇತ್ತ ಪುತ್ತೂರಿಗೂ ಬರಲಾರದೇ 22 ದಿನಗಳಿಂದ ದಾರಿ ಬದಿ ನಿಲ್ಲಿಸಿದ ಕಾರಿನಲ್ಲೇ ಕಾಲ ಕಳೆಯುವಂತಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.