ADVERTISEMENT

ದಕ್ಷಿಣ ಕನ್ನಡ| ಎರಡು ಪ್ರತ್ಯೇಕ ರಸ್ತೆ ಅಪಘಾತ: ಆರು ಮಂದಿ ಸಾವು, ಏಳು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:24 IST
Last Updated 16 ನವೆಂಬರ್ 2025, 6:24 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನ ನಾರಾಯಣ ಗುರು ವೃತ್ತಕ್ಕೆ ಇನ್ನೊವಾ ಕಾರು ಶನಿವಾರ ಡಿಕ್ಕಿ ಹೊಡೆದಿರುವುದು
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನ ನಾರಾಯಣ ಗುರು ವೃತ್ತಕ್ಕೆ ಇನ್ನೊವಾ ಕಾರು ಶನಿವಾರ ಡಿಕ್ಕಿ ಹೊಡೆದಿರುವುದು    

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡರು. 

ನಗರದ ಹೊರವಲಯದ ಪಣಂಬೂರು ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಎರಡು ಗ್ಯಾಸ್ ಟ್ಯಾಂಕರ್‌ಗಳ ನಡುವೆ ಸಿಲುಕಿದ ಆಟೊ ರಿಕ್ಷಾ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಹಾಗೂ ಚಾಲಕ ಸ್ಥಳದಲ್ಲೇ ಅಸುನೀಗಿದರು.

‘ಮೃತರನ್ನು ಉಳ್ಳಾಲದ ರಿಕ್ಷಾ ಚಾಲಕ ಮೊಹಮ್ಮದ್ ಕುಞಿ (25), ಕೊಣಾಜೆ ಮೋಂಟೆಪದವು ನಿವಾಸಿಗಳಾದ ಅಬೂಬಕ್ಕರ್ (65) ಹಾಗೂ ಇಬ್ರಾಹಿಂ (68) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಇನ್ನೊವಾ ಕಾರಿಗೂ ಗ್ಯಾಸ್ ಟ್ಯಾಂಕರ್‌ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಪ್ರಯಾಣಿಕ ಆನಂದ ಸನಿಲ್‌ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಮೂಲ್ಕಿ ಕಡೆಯಿಂದ ಮಂಗಳೂರಿನತ್ತ ಗ್ಯಾಸ್ ಟ್ಯಾಂಕರ್ ಸಾಗುತ್ತಿತ್ತು. ಅದರ ಹಿಂದೆ ಆಟೊ ರಿಕ್ಷಾ ಹಾಗೂ ಇನ್ನೋವಾ ಕಾರು ಸಾಗುತ್ತಿತ್ತು. ಪಣಂಬೂರು ಜಂಕ್ಷನ್‌ನಲ್ಲಿ ಬೀಡಾಡಿ ದನ ಹೆದ್ದಾರಿಯನ್ನು ದಾಟುತ್ತಿರುವುದನ್ನು ನೋಡಿ ಗ್ಯಾಸ್ ಟ್ಯಾಂಕರ್ ಚಾಲಕ ಏಕಾಏಕಿ ಬ್ರೇಕ್‌ ಹಾಕಿ ವಾಹನವನ್ನು ನಿಲ್ಲಿಸಿದ್ದ. ಅದರ ಹಿಂದಿದ್ದ ಆಟೊ ರಿಕ್ಷಾ ಹಾಗೂ ಇನ್ನೋವಾ ಕಾರುಗಳನ್ನೂ ಅದರ ಚಾಲಕರು ನಿಲ್ಲಿಸಿದ್ದರು. ಅಷ್ಟರಲ್ಲಿ  ಹಿಂದಿನಿಂದ ವೇಗವಾಗಿ ಸಾಗಿ ಬಂದ ಇನ್ನೊಂದು ಗ್ಯಾಸ್‌ ಟ್ಯಾಂಕರ್ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಯಿತು. ಚಾಲಕ ಕಾರನ್ನು ಎಡಗಡೆಗೆ ತಿರುಗಿಸಿದ್ದ. ರಭಸವಾಗಿ ಸಾಗಿ ಬಂದ ಟ್ಯಾಂಕರ್‌ ಮುಂದಿದ್ದ ಆಟೊ ರಿಕ್ಷಾಕ್ಕೂ ಡಿಕ್ಕಿ ಹೊಡೆದಿತ್ತು.  ಎರಡು ಟ್ಯಾಂಕರ್‌ಗಳ ಮಧ್ಯೆ ಸಿಲುಕಿ ಆಟೊ ರಿಕ್ಷಾ ಅಪ್ಪಚ್ಚಿಯಾಗಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.  

ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಕ್ರೇನ್ ಸಹಾಯದಿಂದ ರಿಕ್ಷಾವನ್ನು ಸ್ಥಳಾಂತರಿಸಿ, ವಾಹನಗಳು ಸಾಗಲು ದಾರಿ ಮಾಡಿಕೊಡಲಾಯಿತು. ಅಪಘಾತಕ್ಕೆ ಕಾರಣವಾದ ಟ್ರಕ್‌ ಚಾಲಕ ಮೊಹಮ್ಮದ್ ಶೇಕ್ ವಿ. ಎಂಬುವರನ್ನು ನಗರ ಉತ್ತರ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  

ಪಣಂಬೂರು ಪ್ರದೇಶದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಇದ್ದು, ಅವು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತವೆ.  ಈ ಸಮಸ್ಯೆ ನೀಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.  

ಬಿ.ಸಿ.ರೋಡ್:  ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ನಾರಾಯಣ ಗುರು ವೃತ್ತಕ್ಕೆ ಶನಿವಾರ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟರು.

ಮೃತರನ್ನು ಬೆಂಗಳೂರಿನ ಒಂದೇ ಕುಟುಂಬದ ನಿವಾಸಿಗಳಾದ ರವಿ (64), ನಂಜಮ್ಮ (75), ರಮ್ಯಾ (23) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಕುಟುಂಬವು ಉಡುಪಿ ಕೃಷ್ಣಮಠಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ, ಸುಶೀಲಾ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಹಾಗೂ ಚಾಲಕ ಸುಬ್ರಹ್ಮಣ್ಯ ಸೇರಿದಂತೆ ಉಳಿದ 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಈ ಅಪಘಾತದ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣೆ ಕೆ. ತಿಳಿಸಿದರು.

‘ಈ ಅಪಘಾತ ನಡೆದ ಸ್ಥಳದಲ್ಲಿ ಈ ಹಿಂದೆ ಯಾವುದೇ ಗಂಭೀರ ಅಘಾತ ಸಂಭವಿಸಿದ ಉದಾಹರಣೆಗಳಿಲ್ಲ. ಚಾಲಕನ ತಪ್ಪಿನಿಂದ ಈ  ಅಪಘಾತ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ವೃತ್ತದ ಬಳಿ ಮಾರ್ಗ ಸೂಚಿ ಫಲಕ ಇದೆ. ಅಲ್ಲಿನ ಬೀದಿ ದೀಪ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅದನ್ನು ಸರಿಪಡಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪತ್ರ ಬರೆಯುತ್ತೇವೆ’ ಎಂದರು. 

ಮಂಗಳೂರಿನ ಪಣಂಬೂರು ಜಂಕ್ಷನ್‌ನಲ್ಲಿ ಗ್ಯಾಸ್‌ ಟ್ಯಾಂಕರ್ ಡಿಕ್ಕಿ ಹೊಡೆದು ಆಟೊ ರಿಕ್ಷಾ ನಜ್ಜುಗುಜ್ಜಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.