ADVERTISEMENT

ಕಡಬ-ಬೆತ್ತೋಡಿ: ಕುಸಿಯುವ ಭೀತಿಯಲ್ಲಿ ಅಂಗನವಾಡಿ ಕೇಂದ್ರ

ಸಿದ್ದಿಕ್ ನೀರಾಜೆ
Published 21 ಮೇ 2025, 6:55 IST
Last Updated 21 ಮೇ 2025, 6:55 IST
ಕಡಬ ತಾಲ್ಲೂಕಿನ ಐತ್ತೂರು ಗ್ರಾಮದ ಬೆತ್ತೋಡಿ ಅಂಗನವಾಡಿ ಕೇಂದ್ರದ ಚಾವಣಿಯ ಮರದ ಅಡ್ಡ ವಕ್ರವಾಗಿದ್ದು, ಚಾವಣಿ ಕುಸಿಯುವ ಹಂತದಲ್ಲಿದೆ.
ಕಡಬ ತಾಲ್ಲೂಕಿನ ಐತ್ತೂರು ಗ್ರಾಮದ ಬೆತ್ತೋಡಿ ಅಂಗನವಾಡಿ ಕೇಂದ್ರದ ಚಾವಣಿಯ ಮರದ ಅಡ್ಡ ವಕ್ರವಾಗಿದ್ದು, ಚಾವಣಿ ಕುಸಿಯುವ ಹಂತದಲ್ಲಿದೆ.   

ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಐತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆತ್ತೋಡಿ ಅಂಗನವಾಡಿ ಕೇಂದ್ರದ ಚಾವಣಿಯ ಮರದ ಅಡ್ಡ ವಕ್ರವಾಗಿದ್ದು, ಚಾವಣಿ ಕುಸಿಯುವ ‌ಹಂತಕ್ಕೆ ತಲುಪಿದೆ. ಇದರಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕಟ್ಟಡದ ಆಧಾರಸ್ತಂಭದ ಅಡ್ಡ ಹಲಗೆ ಬಾಗಿಕೊಂಡು ದಿನದಿಂದ ದಿನಕ್ಕೆ ಅಪಾಯ ಎದುರಾಗುತ್ತಿದೆ. ಈ ಅಂಗನವಾಡಿ ಕೇಂದ್ರದ ಸೂರು ಹೆಂಚಿನದ್ದಾಗಿದ್ದು, ದುರಸ್ತಿ ಮಾಡಿ ಎಂಟು ವರ್ಷಗಳಾಗಿವೆ. ಪಕ್ಕಾಸುಗಳೂ ಶಿಥಿಲಗೊಂಡಿವೆ. ಮೂಲೆಯ ಹೆಂಚುಗಳು ಸರಿದಿದ್ದು, ಮಳೆ ನೀರು ಒಳಗೆ ಸೇರುತ್ತಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಮಸ್ಯೆ ಹೆಚ್ಚಾಗುತ್ತಿದೆ. ಮಳೆ ಬಿರುಸು ಪಡೆದುಕೊಂಡರೆ ಹೆಂಚುಗಳ ಭಾರ ಹೆಚ್ಚಾಗಿ ಚಾವಣಿ ಕುಸಿಯಬಹುದು ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆತ್ತೋಡಿ ಗ್ರಾಮೀಣ ಪ್ರದೇಶದಲ್ಲಿದ್ದು, ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಹತ್ತು ಪುಟಾಣಿಗಳಿದ್ದು, ಈ ಶೈಕ್ಷಣಿಕ ವರ್ಷಕ್ಕೆ 15ಕ್ಕೆ ಏರಿಕೆ ಆಗಲಿದೆ. ಆದರೆ, ಚಾವಣಿ ಕುಸಿತದ ಭೀತಿಯಿಂದ ಕೆಲವು ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ‌ಅಂಗನವಾಡಿ ಕಟ್ಟಡದ ಚಾವಣಿಯನ್ನು ತಕ್ಷಣ ದುರಸ್ತಿ ಮಾಡಬೇಕು. ನೂತನ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ADVERTISEMENT

ನೂತನ ಆರ್‌ಸಿಸಿ ಕಟ್ಟಡ ನಿರ್ಮಿಸಿ: ಅಂಗನವಾಡಿ ಕಟ್ಟಡದ ಚಾವಣಿ ಕುಸಿಯುವ ಹಂತ ತಲುಪಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಪಂದಿಸಿಲ್ಲ. ಪುಟಾಣಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ದುರಸ್ತಿ ಮಾಡಬೇಕು. ನೂತನ ಆರ್‌ಸಿಸಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಪೋಷಕ ಮಂಜುನಾಥ್ ಕೊಣಾಜೆ ಆಗ್ರಹಿಸಿದ್ದಾರೆ.

ಹತ್ತಿರದ ಕಟ್ಟಡಕ್ಕೆ ಸ್ಥಳಾಂತರಕ್ಕೆ ಸೂಚನೆ: ಕಟ್ಟಡದ ಚಾವಣಿಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದೇನೆ. ಈ ಬಗ್ಗೆ ಕ್ರಮ ವಹಿಸುವ ಸಂಬಂಧ ಸುಸ್ಥಿರ ಇಲ್ಲದ ಕಟ್ಟಡಗಳ ಪಟ್ಟಿಗೆ ಈ ಕಟ್ಟಡವನ್ನೂ ಸೇರಿಸಿ ಇಲಾಖೆಗೆ ಕಳುಹಿಸಿದ್ದೇನೆ. ತಕ್ಷಣ ದುರಸ್ತಿ ಮಾಡುವಂತೆ ಮನವಿ ಮಾಡಲಾಗಿದೆ. ಅದುವರೆಗೆ ಪುಟಾಣಿಗಳನ್ನು ಸಮೀಪದ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ಶಿರಾಡಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ತಿಳಿಸಿದರು.

ಕಡಬ ತಾಲ್ಲೂಕಿನ ಐತ್ತೂರು ಗ್ರಾಮದ ಬೆತ್ತೋಡಿ ಅಂಗನವಾಡಿ ಕೇಂದ್ರದ ಚಾವಣಿಯ ಮರದ ಅಡ್ಡ ವಕ್ರವಾಗಿದ್ದು ಚಾವಣಿ ಕುಸಿಯುವ ಹಂತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.