ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಹಲವೆಡೆ ವಸತಿಗೃಹ ಮತ್ತು ಮಾಸದಂಗಡಿಯ ತ್ಯಾಜ್ಯ ಮತ್ತು ಕೊಳಚೆ ನೀರನ್ನು ನೇತ್ರಾವತಿ ನದಿಗೆ ಹರಿಸುತ್ತಿರುವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದರೂ ಪ್ರಯೋಜನ ಆಗಿಲ್ಲ ಎಂದು ವಿರೋಧ ಪಕ್ಷ (ಬಿಜೆಪಿ) ನಾಯಕ ಎ.ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಪುರಸಭೆಯಲ್ಲಿ ಪುರಸಭಾಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಗಮನ ಸೆಳೆದರು.
ಈ ಬಗ್ಗೆ ಕಟ್ಟಡ ಮಾಲೀಕರು ಮತ್ತು ವಸತಿಗೃಹಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಾಧಿಕಾರಿ ನಝೀರ್ ಅಹ್ಮದ್ ತಿಳಿಸಿದರು.
ರಸ್ತೆ ದುರಸ್ತಿ ಮತ್ತು ಚರಂಡಿ ಹೂಳೆತ್ತುವ ಕಾಮಗಾರಿ ಬಗ್ಗೆ ಟೆಂಡರ್ ಕರೆಯದಿರುವುದು ಸೇರಿದಂತೆ ಹಲವು ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಬಿ.ಕಸಬಾ ಗ್ರಾಮದ ಜಮೀನಿನ ಮೇಲೆ ಉಡುಪಿ-ಕಾಸರಗೋಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ಅಳವಡಿಸಲು ಪುರಸಭೆ ನಿರಕ್ಷೇಪಣಾ ಪತ್ರ ನೀಡಬಾರದು ಎಂದು ಸದಸ್ಯರು ಆಗ್ರಹಿಸಿದರು.
ಉಪಾಧ್ಯಕ್ಷ ಮುನೀಶ್ ಆಲಿ, ಸದಸ್ಯರಾದ ಮಹಮ್ಮದ್ ಶರೀಫ್, ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಹರಿಪ್ರಸಾದ್, ಜೆಸಿಂತ ಡಿಸೋಜ, ವಿದ್ಯಾವತಿ, ಜನಾರ್ದನ ಚೆಂಡ್ತಿಮಾರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.