ಕೊರಗಜ್ಜನ ಕಟ್ಟೆ (ಸಂಗ್ರಹ ಚಿತ್ರ)
ಸಾಂಕೇತಿಕ ಚಿತ್ರ
ಉಳ್ಳಾಲ: ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಕ್ರಿಕೆಟಿಗ ಕೆ.ಎಲ್ ರಾಹುಲ್, ಬಾಲಿವುಡ್ ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ, ಅವರ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ ಭಾಗವಹಿಸಿದ್ದರು.
ಮ್ಯಾಟ್ರಿಕ್ಸ್ ಎಂಟರ್‌ಟೈನ್ಮೆಂಟ್‌ನ ರೇಷ್ಮಾ ಶೆಟ್ಟಿ, ವಿ.ಎಂ ಕಾಮತ್ ಅವರೂ ಜೊತೆಯಲ್ಲಿದ್ದರು.
ಕೋಲ ಕಟ್ಟೆಯಲ್ಲಿ ಹರಕೆಯನ್ನು ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ಹೆಸರು ಬರೆಸಿದ್ದ ವಿಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾನುವಾರ ಭಾಗಿಯಾಗಿದ್ದರು. ಕತ್ರಿನಾ, ರೇಷ್ಮಾ ಶೆಟ್ಟಿ , ಆಧ್ಯಾ ಶೆಟ್ಟಿ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿದ್ದರು. ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾದರು.
ಬಾಲಿವುಡ್ ಕುಟುಂಬ ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟೆಯ ಕಚೇರಿಯವರಲ್ಲಿ ಅವರು ಮನವಿ ಮಾಡಿದ್ದರು.
ಸ್ಥಳದಲ್ಲಿ ಫೋಟೊ ತೆಗೆಯಲು ಬಿಡಲಿಲ್ಲ. ಫೋಟೊ ತೆಗೆದವರಲ್ಲಿ, ‘ಅದನ್ನು ಅಳಿಸಿ’ ಎಂದು ವಿನಂತಿಸಿದ್ದರು. ಕಟ್ಟೆಯೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೋಲವನ್ನು ಹೊರಗೇ ನಿಂತ ಕತ್ರಿನಾ ಕೈಫ್ ಸೇರಿದಂತೆ ಉಳಿದವರು ವೀಕ್ಷಿಸಿದರು. ಗಾಢವಾಗಿ ಕಣ್ಣುಮುಚ್ಚಿ ಪ್ರಾರ್ಥನೆಯಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.