ADVERTISEMENT

ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಸುಧೀರ್ ಕುಮಾರ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:43 IST
Last Updated 25 ಜನವರಿ 2026, 6:43 IST
<div class="paragraphs"><p>ಚಿಕ್ಕ ಹನುಮ</p></div>

ಚಿಕ್ಕ ಹನುಮ

   

ಮಂಗಳೂರು: ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಠಾಣೆ ಪೊಲೀಸರು ವಿಶೇಷ ಶ್ರಮವಹಿಸಿದ್ದಾರೆ. ಅದರಲ್ಲೂ ಲೇಡಿ ಕಾನ್‌ಸ್ಟೆಬಲ್‌ ಲಲಿತಾ ಅವರ ಪ್ರಯತ್ನ ಗುರುತಿಸುವಂತಹುದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. 

ಹೆಸರು, ವಿಳಾಸ ಬದಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ಚಿಕ್ಕ ಹನುಮಂತಪ್ಪನ ಬಂಧನದ ಕುರಿತಂತೆ ಶನಿವಾರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿ, ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ದೀರ್ಘಾವಧಿಯ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಯ ಅಭಿಯಾನದ ವೇಳೆ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಉರ್ವಾ ಠಾಣೆ ಪೊಲೀಸರು, ಅದರಲ್ಲೂ ಮುಖ್ಯವಾಗಿ ಮಹಿಳಾ ಕಾನ್‌ಸ್ಟೆಬಲ್‌ ಲಲಿತಾ 3–4 ತಿಂಗಳು ಪಟ್ಟುಬಿಡದೆ ಶ್ರಮಿಸಿದ್ದಾರೆ. ವಿವಿಧ ಠಾಣೆ, ಕೋರ್ಟ್, ಕಚೇರಿಗಳಿಗೆ ಭೇಟಿ ನೀಡಿದ ವೇಳೆ, ಈತ ನ್ಯಾಯಾಲಯದ ದಾಖಲೆಯೊಂದರಲ್ಲಿ ಹೆಸರು ಬದಲಾಯಿಸಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ವಿಳಾಸ ಬದಲಾಯಿಸಿಕೊಂಡಿದ್ದ ಚಿಕ್ಕ ಹನುಮಂತಪ್ಪ ಆಂಧ್ರದಲ್ಲಿ ಬೇರೆ ಕುಟುಂಬ ಮಾಡಿಕೊಂಡು ಮಕ್ಕಳೊಂದಿಗೆ ನೆಲೆಸಿದ್ದ. ಊರಿನವರನ್ನು ಸಂಪರ್ಕಿಸಿ, ತಂಡದೊಂದಿಗೆ ತೆರಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು. 

1997ರಲ್ಲಿ ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ದಂಡುಪಾಳ್ಯ ಗ್ಯಾಂಗ್ ಕೈವಾಡ ಇರುವುದು ಪತ್ತೆಯಾಗಿತ್ತು. ಆರೋಪಿ ಚಿಕ್ಕ ಹನುಮಂತಪ್ಪ ತಲೆಮರೆಸಿಕೊಂಡಿದ್ದ. ದಂಡುಪಾಳ್ಯ ಗ್ಯಾಂಗ್ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಚಿಕ್ಕ ಹನುಮಂತಪ್ಪ ವಿರುದ್ಧವೂ ಎಂಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಈಗ ಆತನನ್ನು ಬಂಧಿಸಿರುವ ಕಾರಣ ಸಂಬಂಧಪಟ್ಟ ಎಲ್ಲ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದ್ದು, ತನಿಖೆಯ ಹಂತ ನೋಡಿಕೊಂಡು, ಮತ್ತೆ ವಿಚಾರಣೆ ನಡೆಸಬಹುದು ಎಂದು ಹೇಳಿದರು. 

ಚಿಕ್ಕ ಹನುಮಂತಪ್ಪ 2000ನೇ ಇಸವಿಯಲ್ಲೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ದಂಡುಪಾಳ್ಯ ಗ್ಯಾಂಗ್‍ನ  8 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಕೆಲವು ಪ್ರಕರಣಗಳು ದೃಢಗೊಂಡು ಜೀವಾವಧಿ ಶಿಕ್ಷೆಯೂ ಆಗಿದೆ. ಕೆಲವು ಪ್ರಕರಣಗಳಲ್ಲಿ ಮರು ತನಿಖೆಗೆ ಕಳುಹಿಸಿದಾಗ ಕೆಲವರು ಖುಲಾಸೆಗೊಂಡಿದ್ದಾರೆ. ಈತ ಯಾವುದೇ ರೀತಿಯ ವಿಚಾರಣೆಗೆ ಹಾಜರಾಗದ ಕಾರಣ ಮತ್ತೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಜೋಡಿ ಕೊಲೆ ಕೃತ್ಯದಲ್ಲಿ ಎಂಟು ಮಂದಿ ಭಾಗಿಯಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿತ್ತು. ಈಗ ಏಳನೆಯವನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಪ್ರಕರಣ ಭೇದಿಸಿದ ಉರ್ವ ಠಾಣೆ ತಂಡವನ್ನು ಕಮಿಷನರ್ ಅಭಿನಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.