ADVERTISEMENT

ಮಂಗಳೂರು | ದಸರಾ, ಆಯುಧ ಪೂಜೆ: ಹೂವುಗಳು ಅಗ್ಗ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:03 IST
Last Updated 1 ಅಕ್ಟೋಬರ್ 2025, 7:03 IST
<div class="paragraphs"><p>ಮಂಗಳೂರಿನ ಗಡಿಯಾರ ಗೋಪುರದ ಬಳಿ ಮಂಗಳವಾರ ಹೂವಿನ ವ್ಯಾಪಾರ ಭರಾಟೆ ಜೋರಾಗಿತ್ತು&nbsp; </p></div>

ಮಂಗಳೂರಿನ ಗಡಿಯಾರ ಗೋಪುರದ ಬಳಿ ಮಂಗಳವಾರ ಹೂವಿನ ವ್ಯಾಪಾರ ಭರಾಟೆ ಜೋರಾಗಿತ್ತು 

   

ಪ್ರಜಾವಾಣಿ ಚಿತ್ರ  

ಮಂಗಳೂರು: ಆಯುಧ ಪೂಜೆ, ದಸರಾ ಸಲುವಾಗಿ ಬುಧವಾರ ನಗರದಲ್ಲಿ ಹೂವುಗಳದೇ ‘ಹಬ್ಬ’. ಪ್ರಮುಖ ಬೀದಿ ಬೀದಿಗಳಲ್ಲಿ ಸೇವಂತಿಗೆ, ಚೆಂಡು ಹೂವುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು. ಗಣೇಶ ಚತುರ್ಥಿ ಹಬ್ಬದ ಸಂದರ್ಭಕ್ಕೆ ಹೋಲಿಸಿದರೆ ಈ ಹೂವುಗಳ ದರ ತುಸು ಅಗ್ಗವಾಗಿತ್ತು.

ADVERTISEMENT

ಬೀದಿ ಬದಿಗಳಲ್ಲಿ ಮಾರು ಸೇವಂತಿಗೆ ₹100ರಿಂದ ₹ 150ರವರೆಗೆ ಮಾರಾಟವಾದರೆ, ಹೂವಿನ ಅಂಗಡಿಗಳಲ್ಲಿ ₹ 120ರಿಂದ ₹ 150ರವರೆಗೆ ಮಾರಾಟವಾಯಿತು. 2ಡಿ ಸೇವಂತಿಗೆ ಮಾರಿಗೆ ₹200ರಿಂದ ₹250ರವರೆಗೂ ದರ ಇತ್ತು. ಚೆಂಡು ಹೂವಿನ ದರ ಕುಚ್ಚಿಗೆ ₹ 300ರಿಂದ ₹ 400ರಷ್ಟಿತ್ತು. 

ಕನಕಾಂಬರ ಹೂವಿನ ಮಾರು ₹ 200ಕ್ಕೆ, ಕಾಕಡ ಮಲ್ಲಿಗೆ ಮಾರು ₹ 150ಕ್ಕೆ ಮಾರಾಟವಾಯಿತು. ಮಂಗಳೂರು ಮಲ್ಲಿಗೆ ದರ ತುಸು ಇಳಿಕೆಯಾಗಿದ್ದು, ಚೆಂಡಿಗೆ ₹ 300, ಜಾಜಿ ಚೆಂಡಿಗೆ ₹ 250 ಹಾಗೂ ಭಟ್ಕಳ ಮಲ್ಲಿಗೆ ಚೆಂಡಿಗೆ ₹ 250ರಂತೆ ಮಾರಾಟವಾಯಿತು. 

‘ಗಣೇಶ ಚತುರ್ಥಿ ಸಂದರ್ಭದಲ್ಲಿ ಮಳೆಯ ಅಬ್ಬರ ಜೋರು ಇದ್ದುದರಿಂದ ಹೂವಿನ ಇಳುವರಿ ಕಡಿಮೆ ಇತ್ತು. ದಸರಾ ಹಬ್ಬಕ್ಕೆ ಹೂವು ಬೆಳೆಯುವಾಗ ಮಳೆ ಕಡಿಮೆಯಾಗಿ ಬಿಸಿಲು ಜೋರಾಗಿತ್ತು. ಹಾಗಾಗಿ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ತುಮಕೂರು ಮೊದಲಾದ ಜಿಲ್ಲೆಗಳಲ್ಲಿ ಸೇವಂತಿಗೆ ಹಾಗೂ ಚೆಂಡು ಹೂಗಳ ಇಳುವರಿ ಚೆನ್ನಾಗಿ ಬಂದಿದೆ. ಮಳೆಗೆ ಸಿಲುಕದೇ ಇರುವುದರಿಂದ ಹೂವಿನ ಗುಣಮಟ್ಟವೂ ಚೆನ್ನಾಗಿದೆ. ಮಾರುಕಟ್ಟೆಯಲ್ಲಿ ಈ ಹೂವುಗಳು ಭಾರಿ ಪ್ರಮಾಣದಲ್ಲಿ ಲಭ್ಯ ಇರುವುದರಿಂದ ದರ ತುಸು ಕಡಿಮೆ ಇದೆ’ ಎಂದು ಹೂವಿನ ವ್ಯಾಪಾರಿ ಅನಿಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸೋಮವಾರ ಹೂವುಗಳ ದರ ಸ್ವಲ್ಪ ಜಾಸ್ತಿ ಇತ್ತು. ಮಂಗಳವಾರ ದರ ಮತ್ತಷ್ಟು ಜಾಸ್ತಿ ಆಗಬೇಕಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಹೂವುಗಳು ಬಂದಿದ್ದರಿಂದ ಮಂಗಳವಾರ ದರ  ಇಳಿಕೆಯಾಗಿದೆ. ಬುಧವಾರದಿಂದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ  ಇದೆ’ ಎಂದು ಅವರು ತಿಳಿಸಿದರು.  

ತುಟ್ಟಿಯಾಗಿಲ್ಲ ನಿಂಬೆ

 ಪ್ರತಿ ವರ್ಷವೈ ಆಯುಧ ಪೂಜೆ ವೇಳೆಗೆ ನಿಂಬೆ ಹಣ್ಣಿನ ದರ ತುಸು ಹೆಚ್ಚಳವಾಗುತ್ತಿತ್ತು. ಈಸಲ ನಿಂಬೆ ಹಣ್ಣೂ ಪ್ರತಿ ಕೆ.ಜಿ.ಗೆ ₹ 80 ದರ ಇದೆ. ಬಿಡಿಯಾಗಿ ಮಾರಾಟವಾಗುವ ಪ್ರತಿ ನಿಂಬೆಗೆ ₹ 5ರಿಂದ ₹ 8ರವರೆಗೆ ದರ ಇದೆ ಎಂದು ಹಾಪ್‌ಕಾಮ್ಸ್‌ ಮೂಲಗಳು ತಿಳಿಸಿವೆ.  ಆಯುಧ ಪೂಜೆಗೆ ಬಳಕೆಯಾಗುವ ಕುಂಬಳಕಾಯಿದರಲ್ಲಿ ತುಸು ಏರಿಕೆ ಆಗಿದೆ. ಪ್ರತಿ ಕೆ.ಜಿ. ಕುಂಬಳಕಾಯಿಗೆ ಮಂಗಳವಾರ ₹ 50ರಿಂದ ₹ 55ರವರೆಗೆ ದರ ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.