ADVERTISEMENT

ಉಜಿರೆ | ‘ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಲಿ’

ಧರ್ಮಸ್ಥಳ: ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 11 ಮೇ 2025, 13:54 IST
Last Updated 11 ಮೇ 2025, 13:54 IST
ಧರ್ಮಸ್ಥಳ ಪುರಪ್ರವೇಶ ಸಂದರ್ಭ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು
ಧರ್ಮಸ್ಥಳ ಪುರಪ್ರವೇಶ ಸಂದರ್ಭ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು   

ಉಜಿರೆ: ಸಕಲಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆಯಲ್ಲಿ ಮಂಗಲ ಪ್ರವಚನ ನೀಡಿದರು.

ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಬಸದಿಗೆ ಹೋಗಿ ಅಷ್ಟದ್ರವ್ಯಗಳಿಂದ ಅಷ್ಟವಿಧಾರ್ಚನೆ ಪೂಜೆ ಮಾಡಿದಾಗ ಅಷ್ಟಕರ್ಮಗಳ ನಾಶವಾಗುತ್ತವೆ. ದಾನ ಮತ್ತು ದೇವರ ಪೂಜೆ ಶ್ರಾವಕರ ಧರ್ಮವಾಗಿದೆ. ಗೃಹಸ್ಥರು ದಾನ, ಧರ್ಮಾದಿ ಸತ್ಕಾರ್ಯಗಳಿಂದ ಶೋಭಿಸುತ್ತಾರೆ. ದಾನದಿಂದ ದುರ್ಗತಿಯ ನಾಶವಾಗಿ ಸದ್ಗತಿ ಪ್ರಾಪ್ತವಾಗುತ್ತದೆ ಎಂದರು.

ADVERTISEMENT

ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ಮೂಲಕ ದಾನವೇ ಧರ್ಮವಾಗಿ ಧರ್ಮಸ್ಥಳದಲ್ಲಿ ನೆಲೆನಿಂತಿದೆ. ತೀರ್ಥಂಕರರು ತಮ್ಮ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಮಾಡಿದಂತೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರೂ ಅವಿರತ ಸೇವಾಕಾಯಕ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ತೀರ್ಥಂಕರರಾಗುವ ಎಲ್ಲ ಯೋಗ್ಯತೆ ಹಾಗೂ ಮಾನ್ಯತೆ ಹೊಂದಿದ್ದಾರೆ ಎಂದರು.

ಧರ್ಮಸ್ಥಳಕ್ಕೆ ಬಂದಾಗ ತವರು ಮನೆಗೆ ಬಂದ ಅನುಭವ ಆಗುತ್ತಿದೆ. ಹೆಗ್ಗಡೆ ಅವರು ಮತ್ತು ಕುಟುಂಬದವರ ಸೇವಾವೈಖರಿ ಶ್ಲಾಘಿಸಿದರು. ಪೂರ್ವಾಶ್ರಮದಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯೆಯೊಂದಿಗೆ ದೊರೆತ ಸಂಸ್ಕಾರ, ಶಿಸ್ತು ಮತ್ತು ಮಾರ್ಗದರ್ಶನದಿಂದ ಇಂದಿನ ಸ್ಥಾನಕ್ಕೆ ಶೋಭೆ ತಂದಿದೆ ಎಂದರು.

ಸಿದ್ಧವನ ಗುರುಕುಲದಲ್ಲಿ ತಮ್ಮ ಮುತ್ತಜ್ಜ ನೇಮಿಸಾಗರವರ್ಣಿ ಅವರ ಸ್ಮಾರಕ ನಿರ್ಮಿಸಬೇಕು ಎಂದು ಸ್ವಾಮೀಜಿ ಹೆಗ್ಗಡೆ ಅವರಿಗೆ ಸಲಹೆ ನೀಡಿದರು.

ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಗವಹಿಸಿದ್ದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಪಂಚನಮಸ್ಕಾರ ಮಂತ್ರ ಪಠಣದಿಂದ ಅಪಾರ ಶಕ್ತಿ ದೊರಕಿ ನಮಗೆ ಪುಣ್ಯ ಸಂಚಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಪಂಚನಮಸ್ಕಾರ ಮಂತ್ರ ಪಠಣದ ಬಗ್ಗೆ ವಿಶೇಷ ಉಪನ್ಯಾಸ ನೀಡಿರುವುದನ್ನು ಸ್ಮರಿಸಿದರು.

ಉಭಯ ಸ್ವಾಮೀಜಿಗಳ ಪಾದಪೂಜೆ ಮಾಡಿ, ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು.

ಹೇಮಾವತಿ ವೀ.ಹೆಗ್ಗಡೆ, ಶ್ರದ್ಧಾಅಮಿತ್, ಡಿ.ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್, ಸೋನಿಯಾವರ್ಮ ಭಾಗವಹಿಸಿದ್ದರು.

ಪ್ರಥಮ ಬಾರಿ ಧರ್ಮಸ್ಥಳ ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಬೆಳಗೊಳದ ಸ್ವಾಮೀಜಿ ಸಿದ್ಧವನ ಗುರುಕುಲಕ್ಕೂ ಭೇಟಿ ನೀಡಿದರು.

ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡಿದರು
ಬಸದಿಯಲ್ಲಿ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.