ADVERTISEMENT

ಪೌರಕಾರ್ಮಿಕರಿಗೆ ಸಣ್ಣ ಕೊಠಡಿ: ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:25 IST
Last Updated 23 ಜುಲೈ 2021, 16:25 IST
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಫಾಯಿ ಕರ್ಮಚಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಫಾಯಿ ಕರ್ಮಚಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.   

ಮಂಗಳೂರು: ಜಿಲ್ಲೆಯ ಪೌರಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಊಟ-ಉಪಾಹಾರ ಸೇವನೆ ಸೇರಿದಂತೆ ಇತರೆ ಅಗತ್ಯಕ್ಕಾಗಿ ಸಣ್ಣ ಕೊಠಡಿ ನಿರ್ಮಿಸಿ ಕೊಡಲು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದರು.

ನಗರದಲ್ಲಿ ಶಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಫಾಯಿ ಕರ್ಮಚಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರು ಕರ್ತವ್ಯ ನಿರ್ವಹಣೆ ವೇಳೆ ಊಟ-ಉಪಾಹಾರ ಸೇವನೆ, ಸಮವಸ್ತ್ರ ಧರಿಸುವುದು ಇತ್ಯಾದಿಗಳಿಗೆ ಅವರು ಕೆಲಸ ಮಾಡುವ ವಾರ್ಡ್‍ಗಳು ಅಥವಾ ಆಸುಪಾಸಿನ ಸ್ಥಳಗಳಲ್ಲಿ ಸಣ್ಣ ಕೊಠಡಿ ನಿರ್ಮಿಸಿ ಕೊಡಬೇಕು. ಸರ್ಕಾರಿ ಜಾಗ ಲಭ್ಯವಿದ್ದರೆ ಅಲ್ಲೇ ನಿರ್ಮಿಸಬೇಕು, ಇಲ್ಲದಿದ್ದರೆ ಪ್ರಸ್ತಾವ ಸಲ್ಲಿಸಬೇಕು. ಸಂಚರಿಸಲು ಸಾಧ್ಯವಿಲ್ಲದೆ ಸ್ಥಗಿತಗೊಂಡಿರುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ಕೆಲವು ಮಾರ್ಪಾಡು ಮಾಡಿ ಅಥವಾ ಹಡಗುಗಳ ಕಂಪಾರ್ಟ್‍ಮೆಂಟ್‍ಗಳನ್ನು ಇದಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳ ಕುರಿತು ಚಿಂತಿಸಬಹುದು ಎಂದರು.

ADVERTISEMENT

ಈ ಬಗ್ಗೆ ಕ್ರಮ ವಹಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು, ಪೌರಾಯುಕ್ತರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಪೌರಕಾರ್ಮಿಕರಿಗೆ ಆದ್ಯತೆಯ ಮೇರೆಗೆ ಕೋವಿಡ್ ತಡೆ ಲಸಿಕೆ ನೀಡಬೇಕು. ಅವರ ಕುಟುಂಬದ ಸದಸ್ಯರಿಗೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಜಿಲ್ಲೆಯಲ್ಲಿ ಯಾರೂ ಮ್ಯಾನ್‍ಹೋಲ್‍ಗಳಲ್ಲಿ ಇಳಿಯದಂತೆ ಎಚ್ಚರವಹಿಸಬೇಕು ಎಂದರು.

ಪೌರಕಾರ್ಮಿಕರ ನೇಮಕಕ್ಕೆ ಅನುಮತಿ ದೊರೆತಿದೆ, ಈ ಬಗ್ಗೆ ಕೂಡಲೇ ಅಧಿಸೂಚನೆ ಹೊರಡಿಸಲಾಗುವುದು. ಅವರ ನೇಮಕಾತಿಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಸಭೆಗೆ ಮಾಹಿತಿ ನೀಡಿದರು. ಡಿಸಿಪಿ ಹರಿರಾಂ ಶಂಕರ್, ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಸ್.ಬಿ., ಸಮಿತಿಯ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.