ADVERTISEMENT

ಪಣಂಬೂರು ಕಡಲ ಕಿನಾರೆ: ಅನಧಿಕೃತ ಮಳಿಗೆ ತೆರವಿಗೆ ಜಿಲ್ಲಾಧಿಕಾರಿ ಆದೇಶ

ಸ್ವಚ್ಛತೆ ಕಾಪಾಡದ್ದಕ್ಕೆ ರವಿಕುಮಾರ್‌ ಗರಂ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 5:20 IST
Last Updated 2 ಜನವರಿ 2023, 5:20 IST
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್‌. ಅವರು ಪಣಂಬೂರು ಕಡಲ ಕಿನಾರೆಯಲ್ಲಿದ್ದ ಮಳಿಗೆಗಳನ್ನು ಭಾನುವಾರ ಪರಿಶೀಲಿಸಿದರು
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್‌. ಅವರು ಪಣಂಬೂರು ಕಡಲ ಕಿನಾರೆಯಲ್ಲಿದ್ದ ಮಳಿಗೆಗಳನ್ನು ಭಾನುವಾರ ಪರಿಶೀಲಿಸಿದರು   

ಮಂಗಳೂರು: ಪಣಂಬೂರು ಕಡಲ ಕಿನಾರೆಯಲ್ಲಿದ್ದ ನಿಯಮಬಾಹಿರವಾಗಿ ನಿರ್ಮಿಸಲಾಗಿದ್ದ ಆರು ಫಾಸ್ಟ್‌ಫುಡ್‌ ಮಾರಾಟ ಮಳಿಗೆಗಳು ಸೇರಿದಂತೆ ಒಟ್ಟಿ ಒಂಬತ್ತು ಮಳಿಗೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌ ಅವರು ಭಾನುವಾರ ಆದೇಶ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾಡಳಿತ ಹಾಗೂ ಭಾರತೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿದಾರರ ಸಂಸ್ಥೆಗಳ ಒಕ್ಕೂಟದ (ಕ್ರೆಡಾಯ್‌) ಆಶ್ರಯದಲ್ಲಿ ಪಣಂಬೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ‘ಸ್ವಚ್ಛ ಸುಂದರ ಕಿನಾರೆ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕಿನಾರೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕಿನಾರೆಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಮಳಿಗೆಗಳ ಬಳಿಯೂ ಕಸ ರಾಶಿ ಬಿದ್ದಿದ್ದು ಕಂಡು ಮತ್ತಷ್ಟು ಗರಂ ಆದರು.

ಈ ಮಳಿಗೆಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಅವುಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಮಳಿಗೆಗಳ ವರ್ತಕರು, ‘ನಾವು ಇಲ್ಲಿ 40 ವರ್ಷಗಳಿಂದ ಇದ್ದೇವೆ. ನಮ್ಮನ್ನು ದಿಢೀರ್‌ ತೆರವುಗೊಳಿಸು ವಂತಿಲ್ಲ’ ಎಂದು ವಾದಿಸಿದರು. ಇದಕ್ಕೆ ಸೊಪ್ಪುಹಾಕದೆ ಅಧಿಕಾರಿಗಳು ಮಳಿಗೆ ಗಳಲ್ಲಿದ್ದ ಪರಿಕರಗಳನ್ನು ತೆರವುಗೊಳಿಸಿದರು.

ADVERTISEMENT

‘ಇಲ್ಲಿ ಸ್ವಚ್ಛತೆಯ ಕೊರತೆಯೊಂದಷ್ಟೇ ಈ ಮಳಿಗೆಗಳನ್ನು ಮುಚ್ಚಿಸಲು ಕಾರಣವಲ್ಲ. ಈ ಯಾವ ಮಳಿಗೆಯೂ ಪಾಲಿಕೆಯಿಂದ ಉದ್ದಿಮೆ ಪರವಾನಗಿಯನ್ನೇ ಹೊಂದಿಲ್ಲ. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಮಳಿಗೆಗಳನ್ನು ನಡೆಸಲಾಗುತ್ತಿದೆ. ತ್ಯಾಜ್ಯ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ. ಇದರಿಂದ ಸಮುದ್ರದ ಜೀವಿಗಳೂ ಮಾಲಿನ್ಯದ ಸಮಸ್ಯೆ ಎದುರಿಸುವಂತಾ ಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ತಿಂಡಿ ತಿನಿಸು ತಯಾರಿಸಲು ಕಲಬೆರಕೆಯ ಎಣ್ಣೆಗಳನ್ನು ಈ ಮಳಿಗೆಗಳು ಬಳಸುತ್ತಿವೆ. ಇಂತಹ ಮಳಿಗೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.

-0-

‘ಕರಾವಳಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳ ಅವಕಾಶ’

‘ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳ ಅವಕಾಶವಿದೆ. ಇಲ್ಲಿನ ಕಡಲತೀರಗಳ ಸ್ವಚ್ಛತೆ ಕಾಪಾಡಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಲಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್. ತಿಳಿಸಿದರು.

‘ಸ್ವಚ್ಛ ಸುಂದರ ಬೀಚ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವಿಸ್ತಾರವಾದ ನದಿ, ಕಡಲ ತೀರವನ್ನು ಹೊಂದಿವೆ. ಸಮೃದ್ಧ ಸಾಂಸ್ಕೃತಿಕ ಪರಂಪರೆ ಇಲ್ಲಿದೆ. ಇಲ್ಲಿನ ಪ್ರವಾಸಿ ತಾಣಗಳಿಗೆ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಸಾಮೂಹಿಕ ಸಹಭಾಗಿತ್ವದಲ್ಲಿ ಕಿನಾರೆಗಳ ಸ್ವಚ್ಛತೆ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಇತರರಿಗೂ ಮಾದರಿ’ ಎಂದರು.

ಕ್ರೆಡಾಯ್‌ ಜಿಲ್ಲಾ ಘಟಕದ ಅಧ್ಯಕ್ಷ ಪುಷ್ಪರಾಜ್ ಜೈನ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸನಿಲ್, ಕೆಐಒಸಿಎಲ್‌ನ ಹಿರಿಯ ಪ್ರಬಂಧಕ ಮುರುಗೇಶ್, ಎಲ್‌ಆರ್‌ಎಸ್‌ ಕಿನಾರೆ ಪ್ರವಾಸೋದ್ಯಮ ಸಂಸ್ಥೆಯ ಪಾಲುದಾರ ಲಕ್ಷ್ಮೀಶ ಭಂಡಾರಿ ಹಾಗೂ ಡಾ.ರಾಜೇಶ್ ಹುಕ್ಕೇರಿ, ಶಕ್ತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್, ಇನ್ನರ್ ವೀಲ್ ಮಂಗಳೂರು ಉತ್ತರ ಘಟಕದ ಅಧ್ಯಕ್ಷೆ ವಸಂತಿ ಕಾಮತ್ , ಕಾರ್ಯದರ್ಶಿ ಗೀತಾ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.