ADVERTISEMENT

ಹಾವು ಕಡಿದು ‘ಸ್ನೇಕ್ ಮುಸ್ತಾ’ ಸಾವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 11:59 IST
Last Updated 18 ಏಪ್ರಿಲ್ 2021, 11:59 IST
ಮುಹಮ್ಮದ್ ಮುಸ್ತಫಾ.
ಮುಹಮ್ಮದ್ ಮುಸ್ತಫಾ.   

ಉಪ್ಪಿನಂಗಡಿ: ಕೋಳಿ ಗೂಡಿನೊಳಗೆ ಬಲೆಯಲ್ಲಿ ಸಿಲುಕಿಕೊಂಡಿದ್ದ ನಾಗರಹಾವನ್ನು ರಕ್ಷಿಸುತ್ತಿರುವಾಗ ಅದು ಕಡಿದ ಪರಿಣಾಮ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ನಿವಾಸಿ ಮುಹಮ್ಮದ್ ಮುಸ್ತಫಾ ‘ಸ್ನೇಕ್ ಮುಸ್ತಾ’ ಮೃತಪಟ್ಟಿದ್ದಾರೆ.

ಮಹಮ್ಮದ್ ಮುಸ್ತಫಾ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಹಾವುಗಳನ್ನು ಹಿಡಿದು ರಕ್ಷಿಸಿ, ಕಾಡಿಗೆ ಬಿಡುವ ಹವ್ಯಾಸ ಹೊಂದಿದ್ದರು. ಉಪ್ಪಿನಂಗಡಿ ಪರಿಸರದಲ್ಲಿ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದರು.

ಶನಿವಾರ ಸಂಜೆ ಬೆಳ್ತಂಗಡಿ ತಾಲ್ಲೂಕಿನ ನೇಜಿಕಾರು ಎಂಬಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಇವರಿಗೆ ಕರೆ ಬಂದಿದ್ದು, ಅದನ್ನು ರಕ್ಷಿಸಲು ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರ ಎರಡೂ ಕೈಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ದರೂ ದಾರಿ ಮಧ್ಯೆ ಮೃತಪಟ್ಟರು.

ADVERTISEMENT

ವಿಷಕಾರಿ ಹಾವುಗಳನ್ನು ಯಾವುದೇ ಸಲಕರಣೆಗಳನ್ನು ಬಳಸದೆ ಬರಿಗೈಯಲ್ಲೇ ಹಿಡಿದು ದೂರದ ಕಾಡಿಗೆ ಬಿಡುತ್ತಿದ್ದರು. ಇವರು 1000ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇದಕ್ಕಾಗಿ ಹಲವು ಸಂಘ, ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.