
ಮಂಗಳೂರು: ಉಳ್ಳಾಲ ತಾಲ್ಲೂಕಿನ ಮಂಜನಾಡಿಯಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಮಣ್ಣು ಜರಿದು ಬಿದ್ದು ಮೂವರು ಮೃತಪಟ್ಟ ಕುಟುಂಬದವರಿಗೆ ಹೆಚ್ಚುವರಿ ಪರಿಹಾರ ನೀಡುವ ಸಂಬಂಧ ಘಟನೆ ಕುರಿತ ವರದಿ ಬಂದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ತಿಳಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ, ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಕುರಿತ ವಿಚಾರಣೆಗೂ ಮೊದಲು, ಮಂಜನಾಡಿ ದುರಂತದಲ್ಲಿ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಮತ್ತು ಕುಟುಂಬದವರು ಆಯೋಗದ ಪ್ರತಿನಿಧಿಗಳನ್ನು ಭೇಟಿಯಾದರು. ಪತಿ ಸೀತಾರಾಮ ಪೂಜಾರಿ, ಸಹೋದರ ಪವನ್ ಸುವರ್ಣ, ತಾಯಿ ಪುಷ್ಪಲತಾ ಮತ್ತು ಸಂಬಂಧಿ ಸುಮಲತಾ ಅವರು ಅಧ್ಯಕ್ಷರ ಎದುರು ಅಹವಾಲು ತೋಡಿಕೊಂಡರು.
‘ಸಾವಿಗೀಡಾದ ಮೂವರ ಪರವಾಗಿ ತಲಾ ₹ 5 ಲಕ್ಷ, ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ₹ 2 ಲಕ್ಷ ಪರಿಹಾರ ಲಭಿಸಿದೆ. ಆದರೆ ಮಣ್ಣು ಕುಸಿಯಲು ಕಾರಣ ಏನೆಂಬುದರ ಬಗ್ಗೆ ತನಿಖೆ ಆಗಲಿಲ್ಲ. ಅಕ್ರಮವಾಗಿ ರಸ್ತೆ ಮಾಡಿದ್ದರಿಂದ ದುರಂತ ಸಂಭವಿಸಿತ್ತು’ ಎಂದು ದೂರಿದ ಸಂಬಂಧಿಕರು ಅಶ್ವಿನಿ ಅವರಿಗೆ ಉದ್ಯೋಗ ನೀಡಲು ಸೂಚಿಸಬೇಕು ಎಂದು ಕೋರಿದರು.
ಘಟನೆಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಡಿಸಿಪಿ ಕೆ.ರವಿಶಂಕರ್ ಪ್ರಕೃತಿ ವಿಕೋಪ ಎಂದು ಘಟನೆಯನ್ನು ಪರಿಗಣಿಸಲಾಗಿದ್ದು ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದರು. ಮಣ್ಣು ಕುಸಿತಕ್ಕೆ ಕಾರಣ ತಿಳಿಯಲು ಎನ್‌ಐಟಿಕೆಯ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದ್ದು ವರದಿ ಬಂದ ನಂತರ ಸೂಕ್ತ ಎನಿಸಿದರೆ ಇನ್ನಷ್ಟು ಪರಿಹಾರಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಗಣಿಗಾರಿಕೆ: ಸುರಕ್ಷತೆಗೆ ಗಮನ ಕೊಡಿ
ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರಿಗೆ ಸಂಬಂಧಿಸಿ ಗಣಿಗಾರಿಕೆ ಸಕ್ರಮವಾಗಿದ್ದರೂ ಸುರಕ್ಷತೆಗೆ ಒತ್ತು ನೀಡಲು ಕಾಳಜಿ ವಹಿಸಬೇಕು ಎಂದು ಶ್ಯಾಮ ಭಟ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿ 2008ರಲ್ಲಿ 2 ಗಣಿಗಳಿಗೆ ಅನುಮತಿ ನೀಡಲಾಗಿತ್ತು. ಸುತ್ತಮುತ್ತ ಅಪಾಯದ ಸಾಧ್ಯತೆಗಳು ಇಲ್ಲದ ಕಾರಣ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಲಾಗಿತ್ತು. ಈಚೆಗೆ ದೂರುಗಳ ಬಂದ ಕಾರಣ ಪರಿಶೀಲಿಸಿದಾಗ 200 ಮೀಟರ್ ಆಸುಪಾಸಿನಲ್ಲಿ ಮನೆಗಳು ನಿರ್ಮಾಣ ಆಗಿರುವುದು ಕಂಡುಬಂದಿದೆ. ಆದ್ದರಿಂದ ಒಂದು ಗಣಿಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಹಿರಿಯ ಭೂವಿಜ್ಞಾನಿ ಜಿ.ಯು ಸಂದೀಪ್ ತಿಳಿಸಿದರು.
‘ಒತ್ತುವರಿ ತೆರವಿಗೆ ಪೊಲೀಸರ ಬಳಸಿ’
ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದಲ್ಲಿ 20 ಎಕರೆ ಭೂಮಿಯನ್ನು 12 ಕುಟುಂಬದವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರಿಗೆ ಸಂಬಂಧಿಸಿ ಮಾಹಿತಿ ನೀಡಿದ ತಹಶೀಲ್ದಾರ್ ಪೃಥ್ವಿ ಅಲ್ಲಿ ಸರ್ವೆ ಮಾಡಲು ಹೋದರೆ ಕೆಲವರು ಅಡ್ಡಿಪಡಿಸುತ್ತಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪೊಲೀಸರನ್ನು ಬಳಸಿಕೊಂಡು ಸರ್ವೆ ಮಾಡಿಸಬೇಕು. ಒತ್ತುವರಿಯಾಗಿದ್ದರೆ ತೆರವು ಮಾಡಬೇಕು ಎಂದು ತಿಳಿಸಿದರು.
ಮೂಲ್ಕಿ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಶಾಮೀಲಾಗಿ ಕಿರುಕುಳ ನೀಡಿದ್ದಾರೆ ಎಂಬ ದೂರು, ನಗರದ ಬರ್ಕೆ ಠಾಣೆಯಲ್ಲಿ ಲಾಕ್‌ಅಪ್ ದುರುಪಯೋಗ ಆಗಿದೆ ಎಂಬ ದೂರು ನಾಲ್ಕು ಗಂಟೆ ಕಾಲ ಅಕ್ರಮವಾಗಿ ಲಾಕ್ ಅಪ್‌ನಲ್ಲಿ ಇರಿಸಲಾಗಿದೆ ಎಂಬ ದೂರಿಗೆ ಸಂಬಂಧಿಸಿ ಮಾಹಿತಿ ನೀಡಿದ ಉಪಪೊಲೀಸ್ ಆಯುಕ್ತ ಕೆ.ರವಿಶಂಕರ್ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಂಗ ಸದಸ್ಯ ಸದಸ್ಯ ಎಸ್.ಕೆ ವಂಟಗೋಡಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಹಾಗೂ ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಪಾಲ್ಗೊಂಡಿದ್ದರು.
ಪೊಲೀಸ್ ಠಾಣೆಗಳಿಗೆ ಕರೆದುಕೊಂಡು ಹೋಗಿ ಕಿರುಕುಳು ನೀಡುತ್ತಿರುವ ದೂರುಗಳೇ ಹೆಚ್ಚಾಗಿ ಬರುತ್ತಿವೆ. ಬೆಂಗಳೂರಿನಲ್ಲಿ ಇದು ಅಧಿಕರ. ಸಿಸಿಟಿವಿ ಕ್ಯಾಮೆರಾ ಇರುವುದರಿಂದ ಇದರ ವಿಚಾರಣೆ ಸುಲಭವಾಗುತ್ತಿದೆ.ಟಿ.ಶ್ಯಾಮ ಭಟ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ
ಪಿಎಚ್‌ಸಿಯಲ್ಲಿ ಪಾಸಿಟಿವ್; ಖಾಸಗಿಯಲ್ಲಿ ನೆಗೆಟಿವ್!
ಸುಳ್ಯದಲ್ಲಿ 14 ವರ್ಷದ ಬಾಲಕಿಯೊಬ್ಬಳು ಪದೇ ಪದೇ ವಾಂತಿ ಮಾಡಿದ್ದಕ್ಕೆ ಗರ್ಭಧಾರಣೆ ಆಗಿರಬೇಕು ಎಂಬ ಶಂಕೆಯಿಂದ ಹಲವು ಬಾರಿ ತಪಾಸಣೆ ಮಾಡಿಸಿದ್ದಕ್ಕೆ ಸಂಬಂಧಿಸಿ ಪಾಲಕರು ನೀಡಿದ ದೂರಿನ ವಿಷಯ ಇತ್ಯರ್ಥ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದರು. ‘
ಹಲವು ಬಾರಿ ವಾಂತಿ ಮಾಡಿದ್ದಾಳೆ ಎಂದು ಬಾಲಕಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿತ್ತು. ಸಂದೇಹ ಉಳಿಸುವುದು ಬೇಡ ಎಂದು ಗರ್ಭಧಾರಣೆಗೆ ಸಂಬಂಧಿಸಿದ ಪರೀಕ್ಷೆ ಮಾಡಿಸಿದ್ದಾರೆ. ಎರಡು ಬಾರಿ ಪಾಸಿಟಿವ್ ವರದಿ ಬಂದಿದೆ. ನಂತರ ಖಾಸಗಿ ಲ್ಯಾಬ್‌ನಲ್ಲಿ ಮಾಡಿಸಿದಾಗ ನೆಗೆಟಿವ್ ವರದಿ ಬಂದಿದೆ.
ಇದರ ಆಧಾರದಲ್ಲಿ ಮತ್ತೊಮ್ಮೆ ಆರೋಗ್ಯ ಕೇಂದ್ರದ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿದೆ. ಈ ಸಂಬಂಧ ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಅವರು ತಿಳಿಸಿದರು ಸಭೆಯ ನಂತರ ಪತ್ರಕರ್ತರ ಜೊತೆ ಮಾತನಾಡಿದ ಡಾ.ತಿಮ್ಮಯ್ಯ ‘ಪರೀಕ್ಷಾ ಕಿಟ್‌ನ ಒಂದು ಸೆಟ್‌ನಲ್ಲಿ ಲೋಪ ಇತ್ತು. ಅದರಿಂದಾಗಿ ಗೊಂದಲ ಆಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.