ADVERTISEMENT

ಮೀನಿನ ನೆಲೆ ನಿಖರ ಪತ್ತೆಗೆ ಯಂತ್ರ: CMFRI ನಿರ್ದೇಶಕ ಗ್ರಿನ್‌ಸನ್ ಜಾರ್ಜ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:02 IST
Last Updated 6 ಜುಲೈ 2025, 5:02 IST
   

ಮಂಗಳೂರು: ಆಳ ಸಮುದ್ರದಲ್ಲಿರುವ ಮೀನಿನ ಸಂಪನ್ಮೂಲಗಳನ್ನು ಹೆಚ್ಚು ನಿಖರವಾಗಿ ಅನ್ವೇಷಿಸುವ ಯಂತ್ರವನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ ಎಂದು ಕೇಂದ್ರ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ನಿರ್ದೇಶಕ ಗ್ರಿನ್‌ಸನ್ ಜಾರ್ಜ್ ಹೇಳಿದರು.

ಐಸಿಎಆರ್‌ನ ಮಂಗಳೂರು ಪ್ರಾದೇಶಿಕ ಕೇಂದ್ರ, ಸಿಎಂಎಫ್‌ಆರ್‌ಐ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಆಳ ಸಮುದ್ರ ಸಂಪನ್ಮೂಲ ಪರಿಶೋಧನೆ ಮತ್ತು ಅಳಿವಿನಂಚಿನಲ್ಲಿರುವ ಸಂರಕ್ಷಿತ (ಇಟಿಪಿ) ಪ್ರಭೇದಗಳ ಸಂರಕ್ಷಣೆಯ ಜಾಗೃತಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಎಕೊ ಸೌಂಡರ್‌ಗಳ ಮೂಲಕ ಮೀನುಗಳ ನೆಲೆ ಗುರುತಿಸಲಾಗುತ್ತದೆ. ಆದರೆ, ಆಳ ಸಮುದ್ರ ಮೀನುಗಾರಿಕೆಯಲ್ಲಿ ಕೆಲವೊಮ್ಮೆ ಬಲೆಗಳು ನಿಖರವಾದ ಸ್ಥಳ ತಲುಪಲು ವಿಫಲವಾಗಬಹುದು. ಯಂತ್ರಗಳನ್ನು ಅಭಿವೃದ್ಧಿಪಡಿಸಿದರೆ ಆಳ ಸಮುದ್ರದ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬಹುದು. ಜೊತೆಗೆ ಇನ್ನೂ ಬಳಕೆಯಾಗದ ಆಳ ಸಮುದ್ರ ಸಂಪನ್ಮೂಲಗಳನ್ನು ಅನ್ವೇಷಿಸಲು ಆಧುನಿಕ ಸೌಲಭ್ಯ ಹೊಂದಿರುವ ಸುಧಾರಿತ ಹಡಗುಗಳು ಅಗತ್ಯ ಇವೆ. ಆಳ ಸಮುದ್ರ ಮೀನುಗಾರಿಕೆಯಲ್ಲಿ ಸುಸ್ಥಿರತೆಯೂ ಮಹತ್ವದ್ದಾಗಿದೆ ಎಂದರು.

ADVERTISEMENT

ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆ ನಡೆಸಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಸಂಬಂಧ ತರಬೇತಿ ಅವಶ್ಯ. ಇದು ಅವರ ಜೀವನ ಮಟ್ಟ ಸುಧಾರಣೆ ಮತ್ತು ಆದಾಯ ಗಳಿಕೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ. ಆ ಮೂಲಕ ದೇಶದ ಆರ್ಥಿಕತೆಗೂ ಇದು ಸಹಕಾರಿಯಾಗಿದೆ ಎಂದು ಹೇಳಿದರು.

ಮೀನುಗಾರಿಕೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಕಾರ್ಯಾಗಾರ ಉದ್ಘಾಟಿಸಿದರು. ಆಳ ಸಮುದ್ರ ಮೀನುಗಾರಿಕೆಗೆ ಬಳಸುವ ಟ್ರಾಲ್ ಬೋಟ್‌ಗಳಲ್ಲಿ ಆಮೆ ಹೊರಗಿಡುವ ಸಾಧನ ಬಳಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇದು ವಿನಾಶದ ಅಂಚಿನಲ್ಲಿರುವ ಆಲಿವರ್ ರಿಡ್ಲೆ ಆಮೆಗಳ ಸಂತತಿ ಉಳಿಸಲು ಸಹಕಾರಿಯಾಗಲಿದೆ. ಕರ್ನಾಟಕ ಕರಾವಳಿಯಲ್ಲಿ ಸುಮಾರು 3,000 ಟ್ರಾಲ್ ದೋಣಿಗಳಿಗೆ ಈ ಸಾಧನವನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ಹೇಳಿದರು.

ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಕೊಚ್ಚಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುಜಿತ್ ಥಾಮಸ್, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಸಂಘಗಳ ಮೀನುಗಾರರು ಉಪಸ್ಥಿತರಿದ್ದರು.

‘ಮುಂದಿನ ಋತುವಿಗೆ ಸಮುದ್ರ ಆಂಬುಲೆನ್ಸ್’

ಸಮುದ್ರ ಆಂಬುಲೆನ್ಸ್‌ ಅನ್ನು ₹7.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ಒಂದು ವಾರದಲ್ಲಿ ಕಾಮಗಾರಿ ಆದೇಶ ಹೊರಬೀಳಲಿದೆ. 800 ಎಚ್‌ಪಿ ಎಂಜಿನ್‌ ಸಾಮರ್ಥ್ಯದ ಆಂಬುಲೆನ್ಸ್‌ನಲ್ಲಿ ನಾಲ್ವರು ಪ್ಯಾರಾ ಮೆಡಿಕಲ್ ಸಿಬ್ಬಂದಿ, 4–5 ಹಾಸಿಗೆಗಳು ಇರಲಿವೆ. ಸಮುದ್ರದಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗೆ ಇದರಿಂದ ಅನುಕೂಲವಾಗುತ್ತದೆ. ಮುಂದಿನ ಮೀನುಗಾರಿಕಾ ಋತು ಆರಂಭದ ವೇಳೆಗೆ ಇದು ಸಿದ್ಧವಾಗುವ ನಿರೀಕ್ಷೆ ಇದೆ ಎಂದು ದಿನೇಶ್ ಕುಮಾರ್ ಕಳ್ಳೇರ್ ಹೇಳಿದರು.

ಆಂಬುಲೆನ್ಸ್‌ನಲ್ಲಿ ಬೆಂಕಿ ನಂದಿಸುವ ಸಾಧನಗಳು, ಅಗ್ನಿಶಾಮಕ ವ್ಯವಸ್ಥೆ, 20 ಲೈಫ್ ಜಾಕೆಟ್‌ಗಳು, ಜೀವ ರಕ್ಷಕ ಉಪಕರಣಗಳು, ಎರಡು ರಾಫ್ಟ್‌ಗಳು, ಆಮ್ಲಜನಕ ಸಿಲಿಂಡರ್‌ಗಳು ಸೇರಿದಂತೆ ಅಗತ್ಯ ವ್ಯವಸ್ಥೆ ಅಳವಡಿಸುವಂತೆ ತಿಳಿಸಲಾಗಿದೆ. ಕೇರಳದಲ್ಲಿ ಪ್ರಸ್ತುತ ಮೂರು ಸಮುದ್ರ ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಅಧ್ಯಯನಕ್ಕೆ ಕರ್ನಾಟಕದಿಂದ ತಂಡ ಕಳುಹಿಸಲಾಗಿತ್ತು ಎಂದು ಹೇಳಿದರು. 

‘ನಿಷೇಧ ಅವಧಿ ಏಕರೂಪ’

ಮೀನುಗಾರಿಕೆ ನಿಷೇಧದ ಅವಧಿ ವಿಸ್ತರಣೆ ಹಾಗೂ ಮೀನು ಸಂತತಿ ಸಂರಕ್ಷಣೆ ಬಗ್ಗೆ ಅಧ್ಯಯನ ನಡೆಸಿ, ಮುಂದಿನ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ರಚಿಸಿರುವ ತಾಂತ್ರಿಕ ಸಮಿತಿಯು ಡಿಸೆಂಬರ್, ಜನವರಿ ವೇಳೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಗ್ರಿನ್‌ಸನ್ ಜಾರ್ಜ್ ಹೇಳಿದರು.

ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿರುವ ಅವರು, ‘ಮೀನುಗಾರಿಕೆ ನಿಷೇಧದ ಅವಧಿ ವಿಸ್ತರಣೆಯು ಸಮುದ್ರ ಸಂಪನ್ಮೂಲ ರಕ್ಷಣೆಗೆ ಸಹಕಾರಿ. ದೇಶದಾದ್ಯಂತ ಏಕರೂಪದ ನಿಷೇಧದ ಅವಧಿ ಬಗ್ಗೆ ಸಂಬಂಧಪಟ್ಟವರು, ಮೀನುಗಾರರ ಜೊತೆ ಸಮಾಲೋಚಿಸಲಾಗುತ್ತಿದೆ. ಪ್ರಸ್ತುತ 61 ದಿನಗಳ ನಿಷೇಧ ಜಾರಿಯಲ್ಲಿದ್ದು, ಗುಜರಾತ್ ನಿಷೇಧದ ಅವಧಿ ವಿಸ್ತರಣೆಗೆ ಒಪ್ಪಿಗೆ ಸೂಚಿಸಿದೆ. ಕರ್ನಾಟಕವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಭಿನ್ನ ಅಭಿಪ್ರಾಯಗಳಿವೆ’ ಎಂದರು.

ಸಾಂಪ್ರದಾಯಿಕ ಮತ್ತು ಯಾಂತ್ರೀಕೃತ ಮೀನುಗಾರಿಕಾ ವಲಯ, ಪ್ರತಿ ರಾಜ್ಯದ ಮುಂಗಾರು ಅವಧಿ, ಮೀನುಗಾರಿಕಾ ಚಟುವಟಕೆ ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ, ಒಮ್ಮತದ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು. ದೇಶದಾದ್ಯಂತ ಏಕರೂಪದ ನಿಷೇಧದ ದಿನಗಳಿಗೆ ಮೀನುಗಾರರು ಒಲವು ತೋರಿದ್ದಾರೆ ಮತ್ತು ನಿಷೇಧದ ಅವಧಿ ವಿಸ್ತರಣೆಗೂ ಅವರ ಸಹಮತವಿದೆ ಎಂದು ಹೇಳಿದರು.

ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ, ಕರ್ನಾಟಕ ಸರ್ಕಾರ ಮೀನುಗಾರಿಕೆ ನಿಷೇಧ ಅವಧಿಯನ್ನು 61 ದಿನಗಳಿಂದ 90 ದಿನಗಳಿಗೆ ವಿಸ್ತರಿಸಲು ಸಿದ್ಧವಿದೆ ಎಂದು ಕರ್ನಾಟಕ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.