ಮಂಗಳೂರು: ‘ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನಕ್ಕೆ ಸಂಬಂಧಿಸಿದ ‘ಸೃಷ್ಟಿ’ ಕಾರ್ಯಕ್ರಮ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆಯೇ ವಿನಾ ಎಬಿವಿಪಿ ಬೈಠಕ್ ಅಥವಾ ಸಮ್ಮೇಳನ ನಡೆದಿಲ್ಲ. ಪಕ್ಷದ ಕೆಲವು ವಿಘ್ನ ಸಂತೋಷಿಗಳು ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಇನ್ನು ಮುಂದೆ ಯಾರೇ ಆದರೂ ಆಧಾರರಹಿತವಾಗಿ ಈ ರೀತಿ ಆರೋಪ ಮಾಡಿದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅವರು ಸಂದರ್ಶನವೊಂದರಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಎಬಿವಿಪಿ ಸಂಬಂಧಿತ ಕಾರ್ಯಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರ ಕುರಿತು ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
‘ಸೃಷ್ಟಿ ಕಾರ್ಯಕ್ರಮ ಪ್ರತಿವರ್ಷ ಒಂದೊಂದು ಕಡೆ ನಡೆಯುತ್ತದೆ. ನಮ್ಮ ಕಾಲೇಜಿನಲ್ಲಿ ನಡೆಯುವ ಪೂರ್ವದಲ್ಲಿ ತುಮಕೂರಿನಲ್ಲಿರುವ ಜಿ. ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಯಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನು ಹೊರತುಪಡಿಸಿ ಯಾವುದೇ ಎಬಿವಿಪಿ, ಆರ್‌ಎಸ್‌ಎಸ್ ಕಾರ್ಯಕ್ರಮಗಳು ನಡೆದಿಲ್ಲ’ ಎಂದರು.
‘ಕಾಲೇಜು ದಿನಗಳಿಂದ ಎಬಿವಿಪಿ ವಿರೋಧಿಸಿ, ಎನ್‌ಎಸ್‌ಯುಐ ಚಟುವಟಿಕೆಯಲ್ಲಿ ತೊಡಗಿಕೊಂಡು, ನಂತರ ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಚುನಾವಣೆಗೆ ನಿಂತಿದ್ದ ನಾನು ಹೊಂದಾಣಿಕೆ ರಾಜಕಾರಣ ಮಾಡಲು ಸಾಧ್ಯವೇ? ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಸಾಕಷ್ಟು ಬರೆದಿರುವ ಇವರು ಯಾವ ನೈತಿಕತೆ ಆಧಾರದಲ್ಲಿ ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಟಿಕೆಟ್ ಕೇಳಿದ್ದರು? ಆಗ ಇವರಿಗೆ ಸಿದ್ಧಾಂತ ಇರಲಿಲ್ಲವೇ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪ್ರಮುಖರಾದ ಹರೀಶ್ ಕುಮಾರ್, ಶಾಲೆಟ್ ಪಿಂಟೋ, ಶಶಿಧರ್ ಹೆಗ್ಡೆ, ಪದ್ಮರಾಜ್ ಪೂಜಾರಿ, ವಿಕಾಸ್ ಶೆಟ್ಟಿ, ನೀರಜ್ ಪಾಲ್, ರಾಧಾಕೃಷ್ಣ, ಚಿತ್ತರಂಜನ್, ಶುಭೋದಯ ಆಳ್ವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.