
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಅಕಾಡೆಮಿಗಳಿಗೆ ಸಾಂಸ್ಕೃತಿಕ / ಸಮುದಾಯ ಭವನಗಳನ್ನು ನಿರ್ಮಿಸುವ ಕನಸು ದಶಕಗಳ ಬಳಿಕವೂ ಪೂರ್ಣಗೊಂಡಿಲ್ಲ. ಅನುದಾನ ಮಂಜೂರಾಗಿ, ಶಂಕುಸ್ಥಾಪನೆ ನಡೆದ ಬಳಿಕವೂ ಜನಪ್ರತಿನಿಧಿಗಳಿಂದ ಹೊಸ ಹೊಸ ಭರವಸೆಗಳು ಬರುತ್ತಿವೆಯೇ ಹೊರತು, ಅಬ್ಬಕ್ಕ ಭವನ, ಬ್ಯಾರಿ ಭವನ, ಕೊಂಕಣಿ ಭವನ, ಹಜ್ ಭವನ ಮೊದಲಾದ ಮಹಾತ್ವಾಕಾಂಕ್ಷಿ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಭೂಮಂಜೂರಾತಿ ಮತ್ತು ಆಡಳಿತಾತ್ಮಕ ತೊಡಕುಗಳಿಂದ ಈ ಯೋಜನೆಗಳು ವಿಳಂಬವಾಗಿವೆ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲೆಯ ದಶಕಗಳ ಬೇಡಿಕೆಯಾದ ಹಜ್ ಭವನಕ್ಕೆ ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಅನುದಾನ ನೀಡಿದ್ದು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ರಂಗ ಮಂದಿರ ನಿರ್ಮಾಣ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದ್ದು, ಮಂಗಳೂರು ಮಹಾನಗರ ಪಾಲಿಕೆ ಇದಕ್ಕೆಟೆಂಡರ್ ಆಹ್ವಾನಿಸಿದೆ. ಈ ಬೆಳವಣಿಗೆ ಬಳಿಕ, ನನೆಗುದಿಗೆ ಬಿದ್ದಿರುವ ‘ಭವನ’ಗಳು ಮತ್ತೆ ತಲೆಎತ್ತಬಹುದೆಂಬ ಆಸೆ ಚಿಗುರೊಡೆದಿದೆ. ಈ ಭವನಗಳ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.
ಅಬ್ಬಕ್ಕ ಭವನ: ದಶಕದ ಹಿಂದೆ ಶಂಕುಸ್ಥಾಪನೆ:
ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಅಬ್ಬಕ್ಕ ಭವನ ನಿರ್ಮಾಣ ಯೋಜನೆಗೆ 2011–12ರಲ್ಲಿ ₹ 2 ಕೋಟಿ ಮಂಜೂರು ಮಾಡಿದ್ದರು. 2014ರ ಜೂನ್‌ನಲ್ಲಿ ಈ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದ್ದು. ಈ ಯೋಜನೆಗೆ ಶಂಕುಸ್ಥಾಪನೆ ಸಂದರ್ಭದಲ್ಲಿ ಮತ್ತೆ ₹ 5 ಕೋಟಿ ಮಂಜೂರಾಗಿತ್ತು. ಆ ಬಳಿಕ ಮತ್ತೆ ₹ 1 ಕೋಟಿ ಅನುದಾನ ಮಂಜೂರಾಗಿತ್ತು.
ತೊಕ್ಕೊಟ್ಟು ಬಳಿಯ 41 ಸೆಂಟ್ಸ್ ಜಾಗದಲ್ಲಿ ಮೂರು ಮಹಡಿಗಳ, ಅಬ್ಬಕ್ಕ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಮೇಲಿನ ಮಹಡಿಯಲ್ಲಿ 1000 ಆಸನಗಳ ವ್ಯವಸ್ಥೆಯ ಸಭಾಂಗಣ ನಿರ್ಮಿಸುವ, ಮೊದಲ ಮಹಡಿಯಲ್ಲಿ ಸಣ್ಣ ಸಭಾಂಗಣ ಹಾಗೂ ಅಬ್ಬಕ್ಕ ಮ್ಯೂಸಿಯಂ ನಿರ್ಮಿಸುವ, ತಳ ಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ನೆಲ ಮಹಡಿಯಲ್ಲಿ ಊಟಕ್ಕೆ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವ ಇತ್ತು. ಹೆಚ್ಚುವರಿ ಅನುದಾನವನ್ನು ತಂದು ಈ ಕಾಮಗಾರಿ ಪೂರ್ಣಗೊಳಿಸುವುದಾಗಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈ ಭವನದ ಕಾಮಗಾರಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಬ್ಯಾರಿ ಭವನ: 3 ವರ್ಷಗಳಿಂದ ನನೆಗುದಿಗೆ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಟ್ಟಡ ನಿರ್ಮಾಣ ಯೋಜನೆಯೂ ಕುಂಟುತ್ತಾ ಸಾಗುತ್ತಿದೆ. ಈ ಯೋಜನೆಗೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ 2022ರಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಸ್ಥಳೀಯರು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಯೋಜನೆಯೂ ನನೆಗುದಿಗೆ ಬಿತ್ತು. ಬಳಿಕ ಬ್ಯಾರಿ ಭವನಕ್ಕೆ ಅಸೈಗೋಳಿಯಲ್ಲಿ 51 ಸೆಂಟ್ಸ್ ಜಾಗವನ್ನು ಗುರುತಿಸಲಾಯಿತು. ಈ ಯೋಜನೆಗೆ ಸರ್ಕಾರ ₹ 3 ಕೋಟಿ ಅನುದಾನ ಮಂಜೂರು ಮಾಡಿದೆ. ಇದರ ಕಾಮಗಾರಿ ಇನ್ನೂ ಶುರುವಾಗಿಲ್ಲ. ಬ್ಯಾರಿ ಭವನಕ್ಕೆ ಮುಂದಿನ ತಿಂಗಳು ಶಂಕು ಸ್ಥಾಪನೆ ನೆರವೇರಿಸಲಾಗುತ್ತದೆ ಎನ್ನುತ್ತಾರೆ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್.
‘ಅಕಾಡೆಮಿ ಈ ಯೋಜನೆಗೆ ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ಕೋರಿದ್ದು, ಅದಕ್ಕಿನ್ನೂ ಮಂಜೂರಾತಿ ಸಿಕ್ಕಿಲ್ಲ. ಬ್ಯಾರಿ ಭವನದಲ್ಲೀ ಒಂದು ಮ್ಯೂಸಿಯಂ, ಗ್ರಂಥಾಲಯ, ವಾಚನಾಲಯ, ಸಂಶೋಧನಾ ಕೇಂದ್ರ ಹಾಗೂ ಕಚೇರಿಗಳು ಹಾಗೂ ವಾಣಿಜ್ಯ ಪ್ರದೇಶಗಳನ್ನು ನಿರ್ಮಿಸುವ ಪ್ರಸ್ತಾವ ಇದೆ. ಕರ್ನಾಟಕ ಗೃಹಮಂಡಳಿ ಇದರ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ. ಈ ಮ್ಯೂಸಿಯಂನಲ್ಲಿ ಕಲಾಕೃತಿಗಳ ಜೊತೆಗೆ ಬ್ಯಾರಿ ಸಮುದಾಯದ ಚರಿತ್ರೆಗ, ಸಂಸ್ಕೃತಿ ಸಾಹಿತ್ಯ, ಜಾನಪದ ಕಲೆಗಳು ಮತ್ತು ಬ್ಯಾರಿ ಸಂಪ್ರದಾಯಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ದಾಖಲೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ.
ಕೊಂಕಣಿ ಭವನ– ಭಾಗಶಃ ಕಾಮಗಾರಿ
ಕೊಂಕಣಿ ಭವನಕ್ಕೆ ನಗರದ ಉರ್ವಸ್ಟೋರ್‌ನಲ್ಲಿ 2022ರ ಫೆಬ್ರುವರಿ 26ರಂದು ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಈ ಯೋಜನೆಗೆ ₹ 3 ಕೋಟಿ ಅನುದಾನ ಒದಗಿಸಿದೆ. ಲೋಕೋಪಯೋಗಿ ಇಲಾಖೆ ಇದರ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಇದುವರೆಗೆ ₹ 2.69 ಕೋಟಿ ಮೊತ್ತದ ಕಾಮಗಾರಿ ನಡೆದಿದೆ. ದೊಡ್ಡ ಸಭಾಂಗಣ, ಸಭೆ ನಡೆಸಲು ಸಣ್ಣ ಸಭಾಂಗಣ, ಅಧ್ಯಕ್ಷರಿಗೆ ಹಾಗೂ ರಿಜಿಸ್ಟ್ರಾರ್‌ಗೆ ಪ್ರತ್ಯೇಕ ಕೊಠಡಿಗಳು, ಗ್ರಂಥಾಲಯ ಹಾಗೂ ಇತರ ಕೊಠಡಿಗಳನ್ನು ಎರಡು ಮಹಡಿಗಳ ಈ ಕಟ್ಟಡದಲ್ಲಿ ನಿರ್ಮಿಸಲಾಗುತ್ತಿದೆ. ವಿದ್ಯುದೀಕರಣ, ಪ್ಲಂಬಿಂಗ್, ಒಳಾಂಗಣ ವಿನ್ಯಾಸ, ನೆಲಹಾಸು, ಹಾಗೂ ಆವರಣ ಗೋಡೆ ನಿರ್ಮಿಸುವ ಕಾಮಗಾರಿಗಳು ಬಾಕಿ ಇವೆ. ಇವುಗಳನ್ನು ಪೂರ್ಣಗೊಳಿಸಲು ಹೆಚ್ಚುವರಿಯಾಗಿ ₹ 3 ಕೋಟಿ ಅನುದಾನದ ಅಗತ್ಯವಿದೆ. ಇದಕ್ಕೆ ಹೆಚ್ಚುವರಿ ಅನುದಾನ ಮಂಜೂರು ಮಾಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೂಚಿಸಿದ್ದಾರೆ.
ಅನುದಾನ ಕೊರತೆ: ‘ಕುಗ್ಗಿದ’ ರಂಗಮಂದಿರ
ಜಿಲ್ಲೆಗೆ ರಂಗ ಮಂದಿರ ಬೇಕು ಎಂಬುದು ನಾಲ್ಕು ದಶಕಗಳ ಬೇಡಿಕೆ. 2010ರಲ್ಲಿ ಆಗಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ₹ 25 ಕೋಟಿ ವೆಚ್ಚದಲ್ಲಿ ರಂಗ ಮಂದಿರ ನಿರ್ಮಿಸುವ ಯೋಜನೆಯನ್ನು ಆರಂಭದಲ್ಲಿ ರೂಪಿಸಲಾಗಿತ್ತು. ಅದಕ್ಕೆ ಅನುದಾನ ಹೊಂದಿಸುವುದು ಕಷ್ಟವಾಗಿದ್ದರಿಂದ ಯೋಜನಾ ವೆಚ್ಚವನ್ನು ₹ 9.9 ಕೋಟಿಗೆ ಕಡಿತಗೊಳಿಸಲಾಗಿದೆ. ಈ ಯೋಜನೆಗೆ ಮಹಾನಗರ ಪಾಲಿಕೆ ಟೆಂಡರ್ ಆಹ್ವಾನಿಸಿದೆ. ಪರಿಷ್ಕೃತ ಯೋಜನೆ ಪ್ರಕಾರ 13152.28 ಚದರ ಮೀಟರ್ ಜಾಗದಲ್ಲಿ 2277 ಚದರ ಮೀಟರ್ ವಿಸ್ತೀರ್ಣದ ರಂಗಮಂದಿರವು ನಿರ್ಮಾಣಗೊಳ್ಳಲಿದೆ. ಇದರ ಸಭಾಂಗಣವು 675 ಆಸನಗಳ ವ್ಯವಸ್ಥೆಯನ್ನು ಹೊಂದಿರಲಿದೆ.
ಬಜಪೆ: ತಲೆ ಎತ್ತಲಿದೆ ಹಜ್ ಭವನ
ಬಜಪೆ ಬಳಿ ₹ 20 ಕೋಟಿ ವೆಚ್ಚದಲ್ಲಿ ಹಜ್ ಭವನ ನಿರ್ಮಿಸುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. 2009ರಿಂದ ಮಂಗಳೂರಿನಿಂದ ನೇರವಾಗಿ ಹಜ್ ಯಾತ್ರೆ ಕೈಗೊಳ್ಳಲಾಗುತ್ತಿತ್ತು. ದಿ. ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಯೋಜನೆಯನ್ನು ಘೋಷಿಸಿದ್ದರು. ಮಂಗಳೂರಿನಿಂದ ನೇರ ಹಜ್ ಯಾತ್ರೆ 2022ರ ಬಳಿಕ ಸ್ಥಗಿತಗೊಂಡಿದೆ. ಹಜ್ ಭವನವನ್ನು ಕೆಂಜಾರು ಮರವೂರು ಹಾಗೂ ಫರಂಗಿಪೇಟೆ– ಅಡ್ಯಾರ್ ಪ್ರದೇಶದಲ್ಲಿ ನಿರ್ಮಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಅವು ಯಾವುವೂ ಕಾರ್ಯಗತಗೊಂಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.