ADVERTISEMENT

‘ಉಳ್ಳಾಲ ಬ್ರ್ಯಾಂಡ್’ ಗೊಬ್ಬರಕ್ಕೆ ಬೇಡಿಕೆ

ನಿವಾಸಿಗಳ ಸಹಕಾರವಿದ್ದಲ್ಲಿ ಹೆಚ್ಚು ಉತ್ಪಾದನೆ ಸಾಧ್ಯ: ಪೌರಾಯುಕ್ತ ರಾಯಪ್ಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:56 IST
Last Updated 3 ಸೆಪ್ಟೆಂಬರ್ 2021, 3:56 IST
ಉಳ್ಳಾಲ ನಗರಸಭೆಯಿಂದ ಗೊಬ್ಬರ ತಯಾರಿಕೆಗೆ ನಿರ್ಮಿಸಿರುವ ತೊಟ್ಟಿ
ಉಳ್ಳಾಲ ನಗರಸಭೆಯಿಂದ ಗೊಬ್ಬರ ತಯಾರಿಕೆಗೆ ನಿರ್ಮಿಸಿರುವ ತೊಟ್ಟಿ   

ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ತಯಾರಿಸಿದ ಗೊಬ್ಬರಕ್ಕೆ ಭಾರಿ ಬೇಡಿಕೆ ಬರುತ್ತಿದೆ. ಹೊರ ಜಿಲ್ಲೆಗಳ ರೈತರು ಗೊಬ್ಬರ ಖರೀದಿಸಲು ಆಸಕ್ತರಾಗಿದ್ದಾರೆ.

ಉಳ್ಳಾಲ ನಗರಸಭೆ ವ್ಯಾಪ್ತಿಯ ಕಲ್ಲಾಪು ಕಂಬಳಗುತ್ತು ಪ್ರದೇಶದಲ್ಲಿ ಮತ್ತು ನಗರಸಭೆ ಕಚೇರಿ ಆವರಣದಲ್ಲಿ ಲೇಯರ್ ಮತ್ತು ಬಿನ್ ಮಾದರಿಯಲ್ಲಿ ಹಸಿ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ತೋಟ ಇರುವ ಜಾಗದ ಸಮೀಪವೇ ಅರ್ಧ ಸೆಂಟ್ಸ್ ಸ್ಥಳದಲ್ಲಿ ಸಿಮೆಂಟ್ ನೆಲದಲ್ಲಿ ಹಸಿ ಕಸವನ್ನು ಮೂರು ಪದರವಾಗಿ ಜೋಡಿಸಿಟ್ಟು, ಅದರಿಂದ ಬರುವ ದ್ರವ ಮಾದರಿಯನ್ನು ತೋಟಕ್ಕೆ ಬಿಡಲಾಗುತ್ತಿದೆ.

ಹಸಿಕಸಕ್ಕೆ ಕೊಕೊಪಿಟ್ ಹಾಕಿ ಒಣಗಿಸಿ, ಕೆಲದಿನಗಳ ಬಳಿಕ ತಯಾರಾದ ಗೊಬ್ಬರವನ್ನು ಪ್ಯಾಕಿಂಗ್ ಮಾಡಲಾಗುತ್ತದೆ. ನೇರವಾಗಿ ಕೃಷಿಕರು, ಮನೆಯಲ್ಲಿ ತರಕಾರಿ ಗಿಡ ಬೆಳೆಸುವವರಿಗೆ ಪೂರೈಸಲಾಗುತ್ತದೆ. ಶಾಸಕ ಯು.ಟಿ. ಖಾದರ್ ಮುತುವರ್ಜಿಯಿಂದ ಬಿಡುಗಡೆಗೊಂಡ ‘ಉಳ್ಳಾಲ ಬ್ರ್ಯಾಂಡ್’ ಗೊಬ್ಬರಕ್ಕೆ ಕೆ.ಜಿ.ಯೊಂದಕ್ಕೆ ₹ 10 ದರ ಪಡೆಯಲಾಗುತ್ತಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ 11 ಟನ್ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ 7 ಟನ್ ಮಂಗಳೂರಿಗೆ ಹೋದರೆ, ಉಳಿದ 4 ಟನ್‌ನಲ್ಲಿ ನಗರಸಭೆ ಬಳಿ ಮತ್ತು ಕಲ್ಲಾಪು ಭಾಗದಲ್ಲಿ ಗೊಬ್ಬರ ಮಾಡಲಾಗುತ್ತದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ADVERTISEMENT

‘ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ 5 ಕಡೆಗಳಲ್ಲಿ ಇಂತಹ ಘಟಕ ನಿರ್ಮಾಣವಾದಲ್ಲಿ ಹಸಿಕಸ ವಿಲೇವಾರಿಯೂ ಸುಲಭವಾಗಲಿದೆ. ನಾಗರಿಕರಿಗೆ ಆದಾಯವೂ ಸಿಗುತ್ತದೆ. ತಯಾರಿಸಿದ ಗೊಬ್ಬರವನ್ನು ಸದ್ಯ ಸಾವಯವ ತರಕಾರಿ ಬೆಳೆಯಲು ಬಳಕೆ ಮಾಡಲಾಗುತ್ತಿದ್ದು, ಉತ್ತಮ ಫಲ ದೊರೆತಿದೆ. ಕಸ ಎನ್ನುವುದು ಸಂಪನ್ಮೂಲ. ಪ್ರತಿ ನಾಗರಿಕನಿಗೆ ಅರಿವು ಮೂಡಿದಲ್ಲಿ ಮನೆಯಲ್ಲೇ ಗೊಬ್ಬರ ಮಾಡಬಹುದು. ಗೊತ್ತಿಲ್ಲದವರಿಗೆ ತಯಾರಿಸುವ ವಿಧಾನವನ್ನು ನಗರಸಭೆ ಹೇಳಿಕೊಡಲು ಸಿದ್ಧವಿದೆ. ಈ ಮೂಲಕ ಭೂಮಿ ಹಾಳಾಗುವುದನ್ನು ತಡೆದು, ಗೊಬ್ಬರದ ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. ನಗರಸಭೆ ವ್ಯಾಪ್ತಿಯಲ್ಲಿ 3ರಿಂದ 4 ಎಕರೆ ಜಾಗ ಗುರುತಿಸಿದಲ್ಲಿ ಉತ್ತಮ ಗೊಬ್ಬರ ತಯಾರಿಕಾ ಘಟಕ ನಿರ್ಮಿಸಬಹುದು. ಎರೆಹುಳ ಗೊಬ್ಬರವನ್ನೂ ತಯಾರಿಸಲು ಸಾಧ್ಯ ಎನ್ನುತ್ತಾರೆ ಪೌರಾಯುಕ್ತ ರಾಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.