ADVERTISEMENT

ಮಂಗಳೂರು | ಜನಪರ ಯೋಜನೆ ಜಾರಿಗೆ ಸೇವಾಭಾವ ಬೇಕು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:35 IST
Last Updated 25 ಆಗಸ್ಟ್ 2025, 6:35 IST
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ, ಉಡುಪಿ ಘಟಕದಿಂದ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು  ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ, ಉಡುಪಿ ಘಟಕದಿಂದ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು  ಪ್ರಜಾವಾಣಿ ಚಿತ್ರ   

ಮಂಗಳೂರು: ಜನಪರ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬರಬೇಕಾದರೆ ಸೇವಾ ಮನೋಭಾವದ ಸರ್ಕಾರಿ ನೌಕರರ ಅಗತ್ಯವಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳು ಸಮಾಜದ ಅಭಿವೃದ್ಧಿಗಾಗಿ ಕಂಡ ಕನಸನ್ನು ನನಸು ಮಾಡಬೇಕಾದರೆ ಸರ್ಕಾರಿ ನೌಕರರ ಜೊತೆ ಉತ್ತಮ ಸಂಬಂಧ ಇರಿಸಿಕೊಂಡಿರಬೇಕು. 2014ರಿಂದ ದೇಶದಲ್ಲಿ ಭಾರಿ‌ ಬದಲಾವಣೆ ಆಗುತ್ತಿದ್ದು ಅದರ ಪ್ರಯೋಜನ ದಕ್ಷಿಣ ಕನ್ನಡದ ಜನರಿಗೆ ಸಿಗುವಂತೆ ಮಾಡಲು ಸಂಸದನಾಗಿ ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆ ಅವಕಾಶಗಳ ಆಗರ. ಅದನ್ನು ಬಳಸಿಕೊಳ್ಳಲು ಮನಸ್ಸು ಮಾಡಬೇಕಿದೆ. ವಿದ್ಯಾರ್ಥಿಗಳನ್ನು ಬೆಳೆಸಿದರೆ ಸಮಾಜಕ್ಕೆ ಒಳಿತಾಗಲಿದ್ದು ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ವಿಷಯ’ ಎಂದು ಅವರು ನುಡಿದರು.

ದೇಶಭಕ್ತ ಯುವಜನರನ್ನು ಸೃಷ್ಟಿಸುವ ಜವಾಬ್ದಾರಿ ಸಮಾಜದ ಮೇಲೆ ಇದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಪ್ರೇರಣಾ ಸಂದೇಶ ನೀಡಿದ ಅಕ್ಷಯಾ ಗೋಖಲೆ ‘ಅಪ್ಪ ಅಮ್ಮನ ಮೇಲೆ ಭಕ್ತಿ ಇದ್ದರೆ ದೊಡ್ಡ ಶಕ್ತಿಯಾಗಿ ಬೆಂಬಲವಾಗುತ್ತದೆ. ವಿದ್ಯಾರ್ಥಿಗಳು ಕನಸು ಕಂಡು ಅದನ್ನು ಸಾಕಾರಗೊಳಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು’ ಎಂದರು.

ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌ ಷಡಾಕ್ಷರಿ ಮಾತನಾಡಿ ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು. ಅಂಬೇಡ್ಕರ್‌, ವಿಶ್ವೇಶ್ವರಯ್ಯ, ಭಗತ್ ಸಿಂಗ್ ಮುಂತಾದವರು ಕಷ್ಟದಲ್ಲಿ ಬದುಕಿ ಬೆಳೆದು ಬಂದಿದ್ದಾರೆ. ಅಂಥವರ ಜೀವನ ಆದರ್ಶವಾಗಬೇಕು ಎಂದರು.

ರಾಜ್ಯ ಘಟಕದ ಗೌರವಾಧ್ಯಕ್ಷ ಬಸವರಾಜು ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದೆ, ನೆಮ್ನದಿ ನೆಲೆನಿಂತಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಎಂ.ಎಸ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾರು ದಿನಕರ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಉಡುಪಿ ಘಟಕ ಆಯೋಜಿಸಿದ್ದ ಪಿಯುಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿದರು  ಪ್ರಜಾವಾಣಿ ಚಿತ್ರ

ರಾಜಕಾರಣಿ, ಸರ್ಕಾರಿ ನೌಕರರ ಜೊತೆ ಉತ್ತಮ ಸಂಬಂಧ ಇರಬೇಕು’ ‘ವಿದ್ಯಾರ್ಥಿಗಳ ಬೆಳೆಸಿದರೆ ವಿಕಸಿತ ಭಾರತ ಪರಿಕಲ್ಪನೆ ಸಾಕಾರಕ್ಕೆ ಒಳಿತು’ ‘ಅಪ್ಪ ಅಮ್ಮನ ಮೇಲೆ ಭಕ್ತಿ ಇದ್ದರೆ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.