ಜಯಂತ್ ಟಿ.
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಎಸ್ಐಟಿ, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಹಾಗೂ ಗಿರೀಶ ಮಟ್ಟೆಣ್ಣವರ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿತು.
ಎಸ್‌ಐಟಿಯ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ನೇತೃತ್ವದಲ್ಲಿ ಅಧಿಕಾರಿಗಳು ಅವರ ಹೇಳಿಕೆ ದಾಖಲಿಸಿಕೊಂಡರು.
ವಿಚಾರಣೆಗೆ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಜಯಂತ್ ಟಿ., ‘ಮಾಧ್ಯಮಗಳಲ್ಲಿ ಸುದ್ದಿ ನೋಡಿ ಎಸ್‌ಐಟಿಯವರು ಹೊಡೆದರಾ ಎಂದು ಜನರು ಕೇಳುತ್ತಿದ್ದಾರೆ. ನನಗೆ ಯಾವತ್ತೂ ಹೊಡೆದಿಲ್ಲ. ಎಸ್‌ಐಟಿಯವರಿಗೆ ಸಾಕ್ಷ್ಯಾಧಾರ ಮುಖ್ಯ. ಅದರ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ಅವರ ಎದುರು ಯಾರೂ ಸುಳ್ಳು ಹೇಳಲು ಆಗುವುದಿಲ್ಲ’ ಎಂದರು.
‘ನಾನು ಒಪ್ಪಿಸಿರುವ ಮೂರು ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೊಗಾಲಯಕ್ಕೆ ಕಳುಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಗೆ ಅಗತ್ಯ ಇಲ್ಲ ಎಂದು ಕಂಡು ಬಂದರೆ ಮರಳಿಸುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.
‘ಎಸ್‌ಐಟಿ ತನಿಖೆಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಬಹಿರಂಗಪಡಿಸಲಾಗದು. ಸತ್ಯ ಏನೇ ಇದ್ದರೂ ಹೊರಗೆ ಬಂದೇ ಬರುತ್ತದೆ. ಕಾನೂನಿನ ಅರಿವಿಲ್ಲದೇ ತಪ್ಪು ಮಾಡಿದರೂ, ಶಿಕ್ಷೆ ಅನುಭವಿಸಲೇ ಬೇಕು. ಸತ್ಯದ ಹೋರಾಟದಲ್ಲಿ ಸುಳ್ಳುಗಳನ್ನು ಸೃಷ್ಟಿಸಿದರೂ ಜೈಲು ಸೇರಬೇಕಾಗುತ್ತದೆ. ಎಸ್‌ಐಟಿ ತನಿಖೆ ಮುಗಿದ ಬಳಿಕ ಎಲ್ಲವೂ ಗೊತ್ತಾಗಲಿದೆ’ ಎಂದರು.
‘ಸಾಕ್ಷಿ ದೂರುದಾರ ತಂದೊಪ್ಪಿಸಿದ್ದ ಬುರುಡೆ ಹಿಡಿದುಕೊಂಡು ನವದೆಹಲಿಗೆ ಹೋಗಿದ್ದು ನಿಜವೇ’ ಎಂಬ ಪ್ರಶ್ನೆಗೆ, ‘ಅದೆಲ್ಲವನ್ನೂ ಎಸ್‌ಐಟಿಯವರೇ ತಿಳಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.