ADVERTISEMENT

ಧರ್ಮಸ್ಥಳ ಲಕ್ಷದೀಪೋತ್ಸವ: ಸಮವಸರಣ ಪೂಜೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 13:47 IST
Last Updated 25 ನವೆಂಬರ್ 2022, 13:47 IST
ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.
ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.   

ಉಜಿರೆ: ಧರ್ಮಸ್ಥಳದ ಬಸದಿಯಲ್ಲಿ ಗುರುವಾರ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಂಡವು.

ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಚಂದ್ರನಾಥ ಸ್ವಾಮಿಯ, ಬಾಹುಬಲಿ ಸ್ವಾಮಿಯ, ಶ್ರುತದೇವಿ ಹಾಗೂ ಗಣಧರ ಪರಮೇಷ್ಠಿಗಳ ಅಷ್ಟವಿಧಾರ್ಚನೆ ಪೂಜೆ ಸುಶ್ರಾವ್ಯ ಗಾಯನದೊಂದಿಗೆ ನಡೆಯಿತು.

ಇದೇ ವೇಳೆ ವೀಣಾ ರಘುಚಂದ್ರ ಶೆಟ್ಟಿ ಅವರ ‘ಷಟ್ಕಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿ’ ಗ್ರಂಥವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.

ಸಾಹಿತಿ ಜೀವಂಧರ ಕುಮಾರ್ ಹೊಸಪೇಟ ಗ್ರಂಥದ ಬಗ್ಗೆ ಮಾತನಾಡಿ, ಜೈನರ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯದ ಅನುಷ್ಠಾನದಿಂದ ಮೋಕ್ಷ ಮಾರ್ಗ ಪ್ರಾಪ್ತಿಯಾಗುತ್ತದೆ. ಧವಳತ್ರಯ ಗ್ರಂಥಗಳು ಕೂಡಾ ಮೋಕ್ಷ ಪ್ರಾಪ್ತಿಗೆ ಮಾರ್ಗದರ್ಶನ, ಪ್ರೇರಣೆ ನೀಡುತ್ತವೆ. ಇವುಗಳ ಸ್ವಾಧ್ಯಾಯದಿಂದ ಧರ್ಮಪ್ರಭಾವನೆಯಾಗುತ್ತದೆ ಎಂದರು.

ADVERTISEMENT

ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಮಾತನಾಡಿ, ‘ವೀಣಾ ರಘುಚಂದ್ರ ಶೆಟ್ಟಿ ಅವರು ಆದರ್ಶ ಗೃಹಿಣಿಯಾಗಿ, ಶ್ರಾವಕಿಯಾಗಿ ತಮ್ಮ ವಿಶಿಷ್ಟ ಕವಿತಾಶಕ್ತಿಯಿಂದ ಆದಿನಾಥ ವೈಭವದ ಹಾಡುಗಳನ್ನು ಅರ್ಥಗರ್ಭಿತವಾಗಿ ರಚಿಸಿ ಸುಶ್ರಾವ್ಯವಾಗಿ ಹಾಡಿ, ಧರ್ಮಪ್ರಭಾವನೆ ಮಾಡಿದ್ದಾರೆ. ಅನೇಕ ವೃತ-ನಿಯಮಗಳ ಪಾಲನೆಯೊಂದಿಗೆ, ನೋಂಪಿಗಳನ್ನು ಮಾಡಿ, ತ್ಯಾಗಿಗಳ ಸೇವೆ ಮಾಡಿ ಅವರ ಆಹಾರ-ವಿಹಾರದಲ್ಲಿಯೂ ಶ್ರದ್ಧಾ-ಭಕ್ತಿಯಿಂದ ಸೇವೆ ಮಾಡಿ ಪುಣ್ಯ ಸಂಚಯ ಮಾಡಿದ್ದಾರೆ. ಅವರ ಸರಳ ಜೀವನ, ಉನ್ನತ ಚಿಂತನೆ ಸ್ತುತ್ಯಾರ್ಹವಾಗಿದೆ’ ಎಂದು ಹೇಳಿದರು.

ಸಾಹಿತಿ ವೀಣಾ ರಘುಚಂದ್ರ ಶೆಟ್ಟಿ ಬೆಟ್ಕೇರಿ ಅವರನ್ನು ಅಭಿನಂದಿಸಲಾಯಿತು. ಶ್ರದ್ಧಾ ಅಮಿತ್ ಸನ್ಮಾನಪತ್ರ ವಾಚನ ಮಾಡಿದರು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಇದ್ದರು.

ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ವೀಣಾ ರಘುಚಂದ್ರ ಶೆಟ್ಟಿ, ತಾನು ಹಸಿವು, ಬಾಯಾರಿಕೆಯನ್ನೂ ಮರೆತು ಒಂದೂವರೆ ವರ್ಷದಲ್ಲಿ ತನ್ಮಯತೆಯಿಂದ ಕೃತಿಯನ್ನು ರಚಿಸಿರುವುದಾಗಿ ಹೇಳಿದರು.

ಆದರ್ಶ ಜೈನ ಮಹಿಳಾರತ್ನ ಪ್ರಶಸ್ತಿ ಪುರಸ್ಕೃತರಾದ ಅನಿತಾ ಸುರೇಂದ್ರ ಕುಮಾರ್ ಅವರನ್ನೂ ಸನ್ಮಾನಿಸಲಾಯಿತು. ಸಾವಿತ್ರಿ ಪುಷ್ಪದಂತ ಅಭಿನಂದನಾ ಭಾಷಣ ಮಾಡಿದರು. ‌ಅಡುಗೆ ತಜ್ಞರಾದ ಯುವರಾಜ ಹೆಗ್ಡೆ ನಾವರ ಮತ್ತು ದಿನೇಶ್ ಕಾವಳಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.