ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಸಾಕ್ಷಿ ದೂರುದಾರ, ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ಕನ್ಯಾಡಿ ಬಳಿ ಹೊಸ ಜಾಗವನ್ನು ಗುರುವಾರ ತೋರಿಸಿದ್ದು, ಅಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ನೇತ್ರಾವತಿ ನದಿ ಪಕ್ಕದಲ್ಲಿರುವ ಈ ಜಾಗಕ್ಕೆ ಖಾಸಗಿ ಅಡಿಕೆ ತೋಟವೊಂದರ ಮೂಲಕ ಸಾಗಬೇಕಿದೆ. ಉಜಿರೆ– ಧರ್ಮಸ್ಥಳ ರಸ್ತೆಯಿಂದ ಸುಮಾರು 1 ಕಿ.ಮೀ ದೂರವನ್ನು ಕಿರಿದಾದ ರಸ್ತೆಯಲ್ಲಿ ಕ್ರಮಿಸಿ ಈ ಜಾಗವನ್ನು ತಲುಪಬೇಕಿದೆ.ಸ್ನಾನಘಟ್ಟದ ಪಕ್ಕದಲ್ಲಿ ಹರಿಯುವ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ಈ ಜಾಗ ಇದೆ. ಎಸ್‌ಐಟಿ ಸಿಬ್ಬಂದಿ ಸಾಕ್ಷಿ ದೂರುದಾರ ಜೊತೆಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಾಗವನ್ನು ತಲುಪಿದರು.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್‌ಐಟಿ ಎಸ್‌ಪಿ. ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಹಾಗೂ ನೆಲ ಅಗೆಯುವ ಕಾರ್ಮಿಕರು ಸ್ಥಳಕ್ಕೆ ತೆರಳಿದ್ದಾರೆ. ನೆಲವನ್ನು ಅಗೆಯುವ ಯಂತ್ರವನ್ನೂ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಈ ಜಾಗಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಸಾಕ್ಷಿ ದೂರುದಾರ ಇದುವರೆಗೆ ಶವಗಳನ್ನು ಹೂತಿರುವುದಾಗಿ ಹೇಳಿ 17 ಜಾಗಗಳನ್ನು ತೋರಿಸಿದ್ದಾನೆ. ಅವುಗಳಲ್ಲಿ ಶೋಧ ಕಾರ್ಯ ನಡೆಸಿದಾಗ ಎರಡು ಕಡೆ ಮೃತದೇಹದ ಅವಶೇಷಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.