ಪ್ರಾತಿನಿಧಿಕ ಚಿತ್ರ
ಮಂಗಳೂರು: ಧರ್ಮಸ್ಥಳದಲ್ಲಿ ಬೆಳವಣಿಗೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ಗ್ರಾಮದಲ್ಲಿ ಅಸಹಜವಾಗಿ ಸಾವಿಗೀಡಾಗಿದ್ದವರ ಮೃತದೇಹಗಳನ್ನು ಸಾಗಿಸಲು ನೆರವಾಗಿದ್ದರು ಎನ್ನಲಾದ ಇಬ್ಬರು ಆಂಬುಲೆನ್ಸ್ ಚಾಲಕರನ್ನು ಶನಿವಾರ ವಿಚಾರಣೆಗೆ ಒಳಪಡಿಸಿದರು.
ಬೆಳ್ತಂಗಡಿಯ ಜಲೀಲ್ ಹಾಗೂ ಹಮೀದ್ ಎಸ್‌ಐಟಿಯಿಂದ ವಿಚಾರಣೆಗೆ ಒಳಗಾದ ಆಂಬುಲೆನ್ಸ್ ಚಾಲಕರು.
ಎಸ್‌ಐಟಿ ಕಚೇರಿಯಿಂದ ಹೊರ ಬಂದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಲೀಲ್, ‘ನಾನು ಬೆಳ್ತಂಗಡಿಯಲ್ಲಿ 21 ವರ್ಷಗಳಿಂದ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ಕೇಳಿದರು’ ಎಂದರು.
‘ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ಪೊಲೀಸರು ನನಗೆ ಕರೆ ಮಾಡುತ್ತಿದ್ದರು. ಆತ್ಮಹತ್ಯೆ, ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟರು, ವಯೋಸಹಜವಾಗಿ ಸತ್ತವರ ಹಾಗೂ ಗುರುತು ಪತ್ತೆಯಾಗದ ಮೃತದೇಹಗಳನ್ನು ನಾನು ಸಾಗಿಸಿದ್ದೆ’ ಎಂದು ತಿಳಿಸಿದರು.
‘ತನಿಖೆ ಈಗಲೂ ಪ್ರಗತಿಯಲ್ಲಿದೆ. ಇನ್ನು ಮುಂದೆಯೂ ನೋಟಿಸ್ ನೀಡಿದಾಗ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಅವರು ಹೇಳಿದರು.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಮನೆಯಲ್ಲಿ ಶಸ್ತ್ರಾಸ್ತ್ರ ಪತ್ತೆಯಾದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಎರಡೂ ಕಡೆಯವರ ವಾದವನ್ನು ಆಲಿಸಿದ್ದಾರೆ. ಈ ಅರ್ಜಿ ಕುರಿತು ಇದೇ 9ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಮರೋಡಿ ಪರ ವಾದಿಸಿದ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ತಿಳಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿದ್ದ 13 ಪ್ರಕರಣಗಳು ಈಗಾಗಲೇ ಇತ್ಯರ್ಥವಾಗಿವೆ. ಒಂದು ಪ್ರಕರಣದಲ್ಲಿ ಮಾತ್ರ ಅವರಿಗೆ ದಂಡ ವಿಧಿಸಲಾಗಿದೆ. 11 ಪ್ರಕರಣಗಳು ಇನ್ನಷ್ಟೇ ಇತ್ಯರ್ಥವಾಗಬೇಕಿವೆ. ಎರಡು ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದ ಕುರಿತು ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದ. ಎಸ್‌ಐಟಿ ಅಧಿಕಾರಿಗಳು ಶೋಧನಾ ವಾರಂಟ್ ಪಡೆದು ತಿಮರೋಡಿ ಮನೆಯಲ್ಲಿ ಶೋಧ ನಡೆಸಿದ್ದಾಗ 2 ತಲವಾರು 1 ಬಂದೂಕು ಸೇರಿ 44 ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.