ADVERTISEMENT

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಪರಿಶೀಲನೆ

ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
<div class="paragraphs"><p>ಧರ್ಮಸ್ಥಳ ಪ್ರಕರಣ</p></div>

ಧರ್ಮಸ್ಥಳ ಪ್ರಕರಣ

   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ವೇಳೆ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲಿರುವ ಬಂಗ್ಲೆಗುಡ್ಡೆ ಕಾಡಿನಲ್ಲಿ ಮೃತದೇಹದ ಅವಶೇಷಗಳು ನೆಲದ ಮೇಲೆಯೇ ಪತ್ತೆಯಾದ ಜಾಗದಲ್ಲಿ ಮಂಗಳವಾರ ಮತ್ತೆ ಪರಿಶೀಲನೆ ನಡೆದಿದೆ. 

ಕೆಲ ಅಧಿಕಾರಿಗಳು ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿ ಬಂಗ್ಲೆಗುಡ್ಡೆ ಕಾಡಿನತ್ತ ತೆರಳಿದರು. ಅಲ್ಲಿ ಅಳತೆ ಕಾರ್ಯ ನಡೆಸಿ ಸುಮಾರು ಅರ್ಧ ಗಂಟೆ ಬಳಿಕ ಕಾಡಿನಿಂದ ಮರಳಿದರು. 

ADVERTISEMENT

‘ಬಂಗ್ಲೆಗುಡ್ಡೆ ಕಾಡಿನಲ್ಲಿ ಏಳು ತಲೆ ಬುರುಡೆಗಳು ಸೇರಿದಂತೆ ಮೃತದೇಹಗಳ ಅವಶೇಷ ಪತ್ತೆಯಾಗಿದ್ದ ಜಾಗದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮ್ಯಾಪಿಂಗ್ ನಡೆಸಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಪ್ರಕರಣದ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಮನೆ ಪರಿಶೀಲನೆ  ವೇಳೆ ಎರಡು ತಲವಾರು ಹಾಗೂ ಬಂದೂಕು ಪತ್ತೆಯಾದ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಈ ಪ‍್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಿತು. ಮಹೇಶ್‌ ಶೆಟ್ಟಿಗೆ ಜಾಮೀನು ನೀಡುವುದಕ್ಕೆ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಿದರು. 

ಮಹೇಶ್‌ ಶೆಟ್ಟಿ ಪರ ವಾದ ಮಂಡಿಸಿದ ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ, ‘ದಾಖಲಾದ ಈ ದೂರಿನ ಸಂಬಂಧ ಪುರಾವೆಗಳನ್ನೂ ಒದಗಿಸಲಾಗಿಲ್ಲ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಪೂರ್ತಿ ವಿವರಗಳನ್ನು ನೀಡಿಲ್ಲ’ ಎಂದು ಹೇಳಿದರು.

ಪತ್ತೆ ಆದ ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ಇಂತಹ ವಿವರಗಳು, ಅವು ಶಸ್ತ್ರಾಸ್ತ್ರ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ವಾದಿಸಿದರು.

‘ಕೆಲ ಆಯುಧಗಳಿಗೆ  ಶಸ್ತ್ರಾಸ್ತ್ರ ಕಾಯ್ದೆಯಡಿ ಪರವಾನಗಿ ಪಡೆಯುವ ಅಗತ್ಯವಿಲ್ಲ. ಪತ್ತೆ
ಯಾದ ಶಸ್ತ್ರಗಳ ಸಮಗ್ರ ವಿವರಣೆ ನೀಡದೇ  ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ದೂರು ದಾಖಲಿಸಿಕೊಳ್ಳುವಂತಿಲ್ಲ. ಶಸ್ತ್ರಾಸ್ತ್ರಗಳು ದೋಷಪೂರಿತವಾಗಿದ್ದರೆ ಅಥವಾ ಬಳಕೆಗೆ ಯೋಗ್ಯವಲ್ಲದಿದ್ದರೆ, ಎಫ್‌ಐಆರ್ ದಾಖಲಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಈ ಅಪರಾಧಕ್ಕೆ ಎರಡರಿಂದ ಏಳು ವರ್ಷಗಳವರೆಗೆ ಮಾತ್ರ ಶಿಕ್ಷೆ ವಿಧಿಸಲು ಅವಕಾಶವಿದೆ. ಹಾಗಾಗಿ ಈ ಪ್ರಕರಣದಲ್ಲಿ ಮಹೇಶ್‌ ಶೆಟ್ಟಿ ಅವರಿಗೆ ಜಾಮೀನು ಮಂಜೂರು ಮಾಡಬಹುದು’ ಎಂದು ಅವರು ವಾದಿಸಿದರು.

ಸರ್ಕಾರಿ ವಕೀಲರು ಸಮಯಾವಕಾಶ ಕೋರಿದ್ದರಿಂದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಅ.4ಕ್ಕೆ ಮುಂದೂಡಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.