ADVERTISEMENT

ಧರ್ಮಸ್ಥಳದ ಬೊಳಿಯಾರ್ ಕಾಡಿನೊಳಗೆ ತೆರಳಿದ SIT: ಹೊಸ ಜಾಗ ತೋರಿಸಲಿರುವ ದೂರುದಾರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 8:57 IST
Last Updated 8 ಆಗಸ್ಟ್ 2025, 8:57 IST
   

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಧರ್ಮಸ್ಥಳ ಗ್ರಾಮದ ಬೊಳಿಯಾರ್‌ನ ಕಾಡಿನೊಳಗೆ ಶೋಧಕಾರ್ಯಕ್ಕಾಗಿ ಶುಕ್ರವಾರ ತೆರಳಿತು.

ಸಾಕ್ಷಿ ದೂರುದಾರ‌ ಮೊದಲ ದಿನ ನೇತ್ರಾವತಿ ಸ್ನಾನ ಘಟ್ಟದ ಬಯಲಿನಲ್ಲಿ ತೋರಿಸಿದ್ದ 13ನೇ ಜಾಗದಲ್ಲಿ ಶೋಧ ಕಾರ್ಯ ಬಾಕಿ ಇದೆ. ಅಲ್ಲಿ ನೆಲ ಅಗೆಯುವ ಕಾರ್ಯ ಶುಕ್ರವಾರವೂ ನಡೆದಿಲ್ಲ.

ಸಾಕ್ಷಿ ದೂರುದಾರ ಎಸ್ಐಟಿ ಅಧಿಕಾರಿಗಳನ್ನು ಹೊಸ ಜಾಗ ತೋರಿಸಲು ಬೊಳಿಯಾರ್ ಬಳಿಯ ಕಾಡಿನ ಒಳಗೆ ಕರೆದೊಯ್ದಿದ್ದಾನೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಮತ್ತಿತರ ಅಧಿಕಾರಿಗಳು ಜೊತೆಯಲ್ಲಿದ್ದರು. ತಂಡದ ಜೊತೆ ಐದಾರು ಕಾರ್ಮಿಕರು ಮಾತ್ರ ಕಾಡಿನೊಳಗೆ ತೆರಳಿದ್ದಾರೆ.

ADVERTISEMENT

ಸಾಕ್ಷಿ ದೂರುದಾರ‌ ಮೊದಲ‌ ದಿನ ತೋರಿಸಿದ್ದ 13 ಜಾಗ ಹಾಗೂ ಅ ಬಳಿಕ ತೋರಿಸಿದ್ದ ಎರಡು ಜಾಗಗಳ ಪೈಕಿ ಇದುವರೆಗೆ 14 ಕಡೆ ಕಾಡಿನೊಳಗೆ ಶೋಧ‌ ನಡೆಸಲಾಗಿದೆ. ಆತ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ್ದ ಆರನೇ ಜಾಗದಲ್ಲಿ ನೆಲದಡಿ ಮೃತದೇಹದ ಅವಶೇಷ ಪತ್ತೆಯಾಗಿದ್ದರೆ, ಆತ ಕಾಡಿನೊಳಗೆ ತೋರಿಸಿದ್ದ, ಗುರುತು ಮಾಡದ ಇನ್ನೊಂದು ಜಾಗದಲ್ಲಿ ಮೃತದೇಹದ ತಲೆಬುರುಡೆ, ಬೆನ್ನುಮೂಳೆ ಸೇರಿದಂತೆ 100ಕ್ಕೂ ಹೆಚ್ಚು ಮೂಳೆಗಳು ನೆಲದ ಮೇಲೆಯೇ ಸಿಕ್ಕಿದ್ದವು. ಉಳಿದ 12 ಜಾಗಗಳಲ್ಲಿ ಮೃತದೇಹದ ಯಾವುದೇ ಕುರುಹು ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.