ಸಂಗ್ರಹ ಚಿತ್ರ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಎಸ್ಐಟಿ ಶನಿವಾರ ಐವರ ವಿಚಾರಣೆ ನಡೆಸಿತು.
ಸಾಕ್ಷಿ ದೂರುದಾರ ಪೊಲೀಸರಿಗೆ ಒಪ್ಪಿಸಿದ್ದ ಬುರುಡೆ ಇದ್ದ ಜಾಗವನ್ನು ಕಾಡಿನಲ್ಲಿ ತೋರಿಸಿದ್ದ ಧರ್ಮಸ್ಥಳ ಗ್ರಾಮದ ಪಾಂಗಳದ ವಿಠಲ ಗೌಡ, ಧರ್ಮಸ್ಥಳ ಗ್ರಾಮದ ಪ್ರದೀಪ್, ಬುರುಡೆ ಹೊರ ತೆಗೆಯುವ ಕುರಿತ ವಿಡಿಯೊ ಪ್ರಸಾರ ಮಾಡಿದ್ದ ‘ಯುನೈಟೆಡ್ ಮೀಡಿಯ’ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಹಾಗೂ ಗಿರೀಶ್ ಮಟ್ಟೆಣ್ಣವರ್ ಎಸ್‌ಐಟಿಯ ಬೆಳ್ತಂಗಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಎಸ್‌ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳು ಅವರ ಹೇಳಿಕೆ ದಾಖಲಿಸಿಕೊಂಡರು.
17ರಂದು ವಿಶೇಷ ಪ್ರಾರ್ಥನೆ:
‘ಸೌಜನ್ಯಾ ಪರ ಹೋರಾಟಗಾರರು ಸಂಕ್ರಮಣದ ದಿನದಂದು (ಇದೇ 17ರಂದು) ಮಠ, ಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಸತ್ಯ ಹೊರತರುವ ಶಕ್ತಿ ಸಿಗಲಿ ಎಂದು ಕೋರುವರು’ ಎಂದು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಈ ಕುರಿತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ ಸ್‌ಐಟಿ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ ತನಿಖೆ ದುರ್ಬಲಗೊಳಿಸುವ ಯತ್ನವೂ ಇನ್ನೊಂದೆಡೆ ನಡೆಯುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.