ADVERTISEMENT

ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಬರದೆ ನಿರ್ಧರಿಸಲಾಗದು– ಗೃಹ ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 22:30 IST
Last Updated 17 ಫೆಬ್ರುವರಿ 2026, 22:30 IST
ಪರಮೇಶ್ವರ
ಪರಮೇಶ್ವರ   

ಮಂಗಳೂರು: ‘ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸದ್ಯ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ತನಿಖೆಯ ಅಂತಿಮ ವರದಿ ಕೈಸೇರದೇ ಈ ಕುರಿತು ಯಾವುದೇ ನಿರ್ಣಯಕ್ಕೂ ಬರಲಾಗದು’ ಎಂದು ಗೃಹಸಚಿವ ಜಿ.ಪರಮೇಶ್ವರ ಮಂಗಳವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆದಷ್ಟು ಬೇಗ ಅಂತಿಮ ವರದಿ ಸಲ್ಲಿಸುವಂತೆ ಎಸ್ಐಟಿ ಮುಖ್ಯಸ್ಥರಿಗೆ ಸೂಚಿಸಿದ್ದೇನೆ. ವರದಿ ಸಲ್ಲಿಕೆಯಾದಂತೆ ಸಂಪುಟ ಸಭೆಯಲ್ಲಿ ಮಂಡಿಸಲಿದ್ದೇನೆ’ ಎಂದರು.

‘ಕೋಮು ಹಿಂಸಾಚಾರದ ಘಟನೆಗಳ  ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಂಪನಿಗಳು ಕರಾವಳಿಯಲ್ಲಿ ಹೂಡಿಕೆಗೆ ಹಿಂದೇಟು ಹಾಕುತ್ತಿವೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ತಿಳಿಯದು’ ಎಂದು ಗೃಹ ಸಚಿವರು ಹೇಳಿದರು.

ADVERTISEMENT

‘ಈ ಹಿಂದೆ ಕರಾವಳಿಯಲ್ಲಿ ಅಂತಹ ವಾತಾವರಣ ಇದ್ದುದು ಸತ್ಯ. ಈಗ ಬದಲಾಗಿರುವುದು  ಸತ್ಯ.‌ ನಾನು ಅಧಿಕೃತ ಅಂಕಿ ಅಂಶಗಳ ಆಧಾರದಲ್ಲಿ ಈ ಮಾತು ಹೇಳುತ್ತೇನೆ. ಕರಾವಳಿಯಲ್ಲಿ ಕೋಮುದ್ವೇಷದ ಕೊಲೆಗಳು, ಡ್ರಗ್ಸ್ ದಂಧೆ ಕಡಿಮೆ ಆಗಿದೆ. ಇಲ್ಲಿ ಶಾಂತಿ ಸ್ಥಾಪನೆ ಆಗು
ತ್ತಿರುವುದರ ಸೂಚನೆ ಇದು’ ಎಂದರು.

‘ಶಾಸಕರ ವಿದೇಶಿ ಪ್ರವಾಸ ಅವರ ವೈಯಕ್ತಿಕ ನಿರ್ಧಾರ. ಅವರ ಹಣದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು. ಅದು ಅಧ್ಯಯನ ಪ್ರವಾಸವೂ ಆಗಿರಬಹುದು, ತಪ್ಪು ಎನ್ನಲಾಗದು‘ ಎಂದು
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.