ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ದೂರುದಾರ ತೋರಿಸಿದ್ದ 13 ನೇ ಜಾಗದಲ್ಲಿ ಯಂತ್ರದ ಮೂಲಕ ನೆಲ ಅಗೆಯುವ ಕಾರ್ಯ ಬುಧವಾರ ಮುಂದುವರಿಯಿತು.
‘ಸುಮಾರು 16 ಅಡಿ ಆಳಕ್ಕೆ ಅಗೆದರೂ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿಲ್ಲ’ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ತಿಳಿಸಿವೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಈ ಜಾಗದಲ್ಲಿ ವಿದ್ಯುತ್ ಮಾರ್ಗ, ಮೂರು ವಿದ್ಯುತ್ ಕಂಬಗಳಿವೆ. ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (ಜಿಪಿಆರ್) ಸಾಧನ ಬಳಸಿ ನೆಲದಡಿಯ ಸಂರಚನೆ ತಿಳಿದುಕೊಂಡ ಬಳಿಕವೇ ಅಗೆಯುವ ಕಾರ್ಯ ಆರಂಭಿಸಲಾಗಿತ್ತು. ಮಂಗಳವಾರ ಕತ್ತಲಾವರಿಸಿದ್ದರಿಂದ ಶೋಧ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.
ಬುಧವಾರ ಒಂದು ದೊಡ್ಡ ಯಂತ್ರ ಹಾಗೂ ಸಣ್ಣ ಯಂತ್ರ ಬಳಸಿ ಗುಂಡಿ ತೋಡಲಾಯಿತು. ಸುಮಾರು 30 ಅಡಿ ಉದ್ದ, 25 ಅಡಿ ಅಗಲ, 16 ಅಡಿ ಆಳದಷ್ಟು ಜಾಗದಲ್ಲಿ ಅಗೆಯಲಾಯಿತು. ಸಂಜೆ 6.50ರವರೆಗೂ ಈ ಕಾರ್ಯಾಚರಣೆ ಮುಂದುವರಿಯಿತು.
ಸಾಕ್ಷಿ ದೂರುದಾರ ಸ್ಥಳದಲ್ಲೇ ಇದ್ದು ಎಲ್ಲೆಲ್ಲಿ ಅಗೆಯಬೇಕು ಎಂದು ತೋರಿಸುತ್ತಿದ್ದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಸ್ಥಳದಲ್ಲಿದ್ದರು.
‘ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಬಳಿ ಮೃತದೇಹಗಳನ್ನು ಹೂತು ಹಾಕಿದ್ದನ್ನು ನೋಡಿದ್ದೇವೆ’ ಎಂದು ಎಸ್‌ಐಟಿಗೆ ದೂರು ನೀಡಿರುವುದಾಗಿ ಇಬ್ಬರು ವ್ಯಕ್ತಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬೆಳ್ತಂಗಡಿಯ ಎಸ್‌ಐಟಿ ಕಚೇರಿ ಬಳಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಧರ್ಮಸ್ಥಳ ಗ್ರಾಮದ ಪುರಂದರ ಗೌಡ ‘ನೇತ್ರಾವತಿ ಸ್ನಾನಘಟ್ಟದ ಬಳಿಯ ಅಂಗಡಿಯಲ್ಲಿ 2003ರಿಂದ 2017ರವರೆಗೆ ಇದ್ದೆ. ಸಾಕ್ಷಿ ದೂರುದಾರ ಸ್ನಾನಘಟ್ಟದ ಬಳಿ ತೋರಿಸಿದ್ದ 1ನೇ ಜಾಗದ ಬಳಿ ಅಂಬಾಸಿಡರ್ ಕಾರಿನಲ್ಲಿ ತಂದಿದ್ದ ಮೃತದೇಹವನ್ನು ಎರಡು ಮೂರು ಜನ ಸೇರಿ ಹೂತು ಹಾಕಿದ್ದನ್ನು ನೋಡಿದ್ದೆ. ಆಗ ಪೊಲೀಸರು ಅಥವಾ ವೈದ್ಯರು ಜೊತೆಗಿದ್ದುದನ್ನು ನೋಡಿಲ್ಲ. ಆಗ ಶವಗಳನ್ನು ಹೂತಿದ್ದ ಒಬ್ಬ ವ್ಯಕ್ತಿಯ ಮೈಕಟ್ಟು ಸಾಕ್ಷಿ ದೂರುದಾರನನ್ನೇ ಹೋಲುತ್ತಿತ್ತು’ ಎಂದು ತಿಳಿಸಿದರು.
‘ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದ ಬಳಿ ಹಿಂದೆ ಪೊದೆಗಳಿದ್ದವು. ಶೌಚಾಲಯವಿತ್ತು. ಒಂದು ದಿನ ಸಂಜೆ ವ್ಯಕ್ತಿಯೊಬ್ಬ ಕೈಗಾಡಿಯಲ್ಲಿ ಮೃತದೇಹ ತಂದು ಅಲ್ಲಿ ಹೂತು ಹಾಕುವುದನ್ನು ನೋಡಿದ್ದೇನೆ. ಸಾಕ್ಷಿ ದೂರುದಾರನ ಹೇಳಿಕೆ ನಿಜ ಇರಬಹುದು’ ಎಂದರು.
‘ಈ ಬಗ್ಗೆ ಆ. 8ರಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದೇವೆ. ಈಗ ಎಸ್‌ಐಟಿ ಮುಂದೆ ಹೇಳಿಕೆ ನೀಡಲು ಬಂದಿದ್ದೇನೆ’ ಎಂದು ತಿಳಿಸಿದರು.
‘ನದಿಯ ಇನ್ನೊಂದು ಕಡೆ ಮೃತದೇಹ ಹೂತು ಹಾಕಿದ್ದ ಬಗ್ಗೆಯೂ ನನಗೆ ತಿಳಿದಿದ್ದು ಆ ಬಗ್ಗೆಯೂ ಎಸ್‌ಐಟಿಗೆ ಮಾಹಿತಿ ನೀಡುತ್ತೇನೆ’ ಎಂದರು. ಧರ್ಮಸ್ಥಳ ಗ್ರಾಮದ ತುಕಾರಾಮ ಗೌಡ ‘ಮೃತದೇಹ ಹೂತು ಹಾಕಿದ್ದನ್ನು ನೋಡಿದ್ದೇನೆ. ಸಾಕ್ಷಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಆ ಜಾಗ ಸೇರಿಲ್ಲ. ಎಸ್‌ಐಟಿಗೆ ಮಾಹಿತಿ ನೀಡುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.