ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ನೇತ್ರಾವತಿ ಸ್ನಾನಘಟ್ಟದ ಸಮೀಪ ಹೆದ್ದಾರಿ ಪಕ್ಕದ ಕಾಡಿನೊಳಗೆ ಶೋಧಕಾರ್ಯಕ್ಕಾಗಿ ಬುಧವಾರ ತೆರಳಿತು.
ಸಾಕ್ಷಿ ದೂರುದಾರ ಇದುವರೆಗೆ ತೋರಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಜಾಗಗಳಲ್ಲಿ ಎಸ್ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ಅಲ್ಲದೇ ಆತ ಮೊದಲ ದಿನ ತೋರಿಸಿದ್ದ ಜಾಗಗಳ ಹೊರತಾಗಿ, ಸೋಮವಾರ ತೋರಿಸಿದ್ದ ಬೇರೆ ಜಾಗದಲ್ಲೂ ಶೋಧ ಕಾರ್ಯ ನಡೆಸಿದೆ.
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಯಲಿನಲ್ಲಿರುವ 13ನೇ ಜಾಗದಲ್ಲಿ ಬುಧವಾರ ಶೋಧ ನಡೆಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎಸ್ಐಟಿ ತಂಡವು ಸಾಕ್ಷಿ ದೂರುದಾರ ತೋರಿಸಿದ್ದ,12ನೇ ಜಾಗವಿರುವ ಕಡೆಯಿಂದ ಕಾಡಿನ ಒಳಗೆ ತೆರಳಿದೆ.
'ಇದೇ ಕಾಡಿನಲ್ಲಿ ಸಾಕ್ಷಿ ದೂರುದಾರ ಮತ್ತೊಂದು ಜಾಗವನ್ಜು ತೋರಿಸಿದ್ದು ಅಲ್ಲಿ ಇಂದು ಶೋಧ ಕಾರ್ಯ ನಡೆಸಲಾಗುತ್ತದೆ' ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಇಂದು ಕಾಡಿನೊಳಗೆ ಅಗೆಯವ ಸ್ಥಳಕ್ಕೆ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ವಿಧಿವಿಜ್ಞಾನ ತಜ್ಞರು ಹಾಗೂ ಸಾಕ್ಷಿದೂರುದಾರ ಹಾಗೂ ಆತನ ವಕೀಲರು, ಭದ್ರತಾ ಸಿಬ್ಬಂದಿ, ಅಂದಾಜು 20 ಕಾರ್ಮಿಕರು ಕಾಡಿನೊಳಗೆ ತೆರಳಿದ್ದಾರೆ. ನೆಲ ಅಗೆಯುವ ಯಂತ್ರವನ್ನು ಇಂದು ಸ್ಥಳಕ್ಕೆ ತರಿಸಿಕೊಂಡಿಲ್ಲ.
ಇದುವರೆಗೆ ಶೋಧ ನಡೆಸಿರುವ ಜಾಗಗಳಲ್ಲಿ ಎರಡು ಕಡೆ ಮೃತದೇಹದ ಅವಶೇಷಗಳು ಸಿಕ್ಕಿವೆ. ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಸಿಕ್ಕಿದ್ದರೆ, ಆತ ಕಾಡಿನೊಳಗೆ ತೋರಿಸಿದ್ದ, ಗುರುತು ಮಾಡದ ಇನ್ನೊಂದು ಜಾಗದಲ್ಲಿ ಮೃತದೇಹದ ತಲೆಬುರುಡೆ, ಬೆನ್ನುಮೂಳೆ ಸೇರಿದಂತೆ 100ಕ್ಕೂ ಹೆಚ್ಚು ಮೂಳೆಗಳು ಸಿಕ್ಕಿದ್ದವು. ಇನ್ನುಳಿದ 11 ಜಾಗಗಳಲ್ಲಿ ಮೃತದೇಹಗಳ ಕುರುಹು ಸಿಕ್ಕಿಲ್ಲ.
ಮೊಹಾಂತಿ ಸಮ್ಮುಖದಲ್ಲಿ ಸಭೆ: ಇಂದು ಎಸ್ಐಟಿ ಮುಖ್ಯಸ್ಥರಾಗಿರುವ ಡಿಜಿಪಿ ಪ್ರಣವ್ ಮೊಹಾಂತಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದಿದ್ದು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶೋಧ ಕಾರ್ಯ ಆರಂಭವಾಗುವುದಕ್ಕೂ ಮುನ್ನ ನಡೆದ ಈ ಸಭೆಯಲ್ಲಿ ಎಸ್ಐಟಿಯ ಡಿಐಜಿ ಅನುಚೇತ್, ಎಸ್.ಪಿ.ಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.