ADVERTISEMENT

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ: ಎನ್‌ಐಎ ತನಿಖೆಗೆ ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:29 IST
Last Updated 27 ಆಗಸ್ಟ್ 2025, 4:29 IST
ಸುದ್ದಿಗೋಷ್ಠಿಯಲ್ಲಿ ಸತೀಶ್ ಕುಂಪಲ ಮಾತನಾಡಿದರು. ವಸಂತ ಪೂಜಾರಿ, ಪ್ರೇಮಾನಂದ ಶೆಟ್ಟಿ, ಡಾ.ವೈ.ಭರತ್ ಶೆಟ್ಟಿ ಹಾಗೂ ಸಂಜಯ ಪ್ರಭು ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಸತೀಶ್ ಕುಂಪಲ ಮಾತನಾಡಿದರು. ವಸಂತ ಪೂಜಾರಿ, ಪ್ರೇಮಾನಂದ ಶೆಟ್ಟಿ, ಡಾ.ವೈ.ಭರತ್ ಶೆಟ್ಟಿ ಹಾಗೂ ಸಂಜಯ ಪ್ರಭು ಭಾಗವಹಿಸಿದ್ದರು   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದ್ದು, ಇದರ ಸಮಗ್ರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ)  ವಹಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಒತ್ತಾಯಿಸಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ, ‘ಈ ಷಡ್ಯಂತ್ರವು ರಾಷ್ಟ್ರೀಯ ಸುರಕ್ಷತೆಗೂ ಧಕ್ಕೆ ತರುವಂತಹದ್ದು. ಇದರ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಜಾಲವಿರುವ ಸಂಶಯವಿದ್ದು, ಇದರ ತನಿಖೆಯನ್ನು ಎನ್‌ಐಎಗೆ ವಹಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರದ ವಿರುದ್ಧ ಷಡ್ಯಂತ್ರ  ನಡೆದಿದ್ದರೂ ಇಲ್ಲಿನ ಹಿಂದೂಗಳಾಗಲೀ, ನಮ್ಮ ಪಕ್ಷವಾಗಲಿ ತನಿಖೆಗೆ ಅಡ್ಡಿಪಡಿಸಿಲ್ಲ. ಇದೇ ಬೇರೆ ಧರ್ಮದ ಧಾರ್ಮಿಕ ಕೇಂದ್ರದ ಬಗ್ಗೆ ಹೀಗೆ ಅಪಪ್ರಚಾರ ನಡೆಯುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು’ ಎಂದು ಪ್ರಶ್ನಿಸಿದರು.

ADVERTISEMENT

‘ಕ್ಷೇತ್ರದ ಹೆಸರು ಕೆಡಿಸುವ ಪ್ರಕ್ರಿಯೆ ಶುರುವಾಗಿದ್ದು ಸಮೀರ್‌ ಎಂ.ಡಿ. ಮಾಡಿದ ವಿಡಿಯೊದಿಂದ. ಸರ್ಕಾರ ಆತನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕಿತ್ತು. ಆತನನ್ನು ಇದುವರೆಗೂ ಏಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು.

ಶಾಸಕ ಡಾ.ವೈ.ಭರತ್ ಶೆಟ್ಟಿ, ‘ಈ ಕ್ಷೇತ್ರಕ್ಕೆ ಸಂಬಂಧಿಸಿ ಸಮೀರ್ ಕೃತಕ ಬುದ್ಧಿಮತ್ತೆ ಆಧರಿಸಿದ ವಿಡಿಯೊ ತಯಾರಿಸಿದ್ದು, ಅದಕ್ಕೆ ಭಾರಿ  ಹಣದ ಅಗತ್ಯ ಇದೆ. ಈ ವಿಡಿಯೊವನ್ನು ಪ್ರಚುರಪಡಿಸುವುದಕ್ಕೂ ಆರ್ಥಿಕ ನೆರವು ಬೇಕು. ಅದರ ಮೂಲ ಪತ್ತೆಗೆ ಎನ್‌ಐಎ ಅಥವಾ ಜಾರಿ ನಿರ್ದೇಶನಾಲಯದ ಅಗತ್ಯ ಇದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ವಸಂತ ಪೂಜಾರಿ ಭಾಗವಹಿಸಿದ್ದರು.

ಸೆ.1ರಂದು 1 ಲಕ್ಷ ಜನ ಧರ್ಮಸ್ಥಳಕ್ಕೆ:

ಧರ್ಮಸ್ಥಳದ ಮೇಲಿನ ಧಾರ್ಮಿಕ ನಂಬಿಕೆ ಉಳಿಸಲು ರಾಜ್ಯ ಬಿಜೆಪಿ ವತಿಯಿಂದ ಸೆ.1ರಂದು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಘಟಕವು ಇದಕ್ಕೆ ಸಿದ್ಧತೆ ನಡೆಸುತ್ತಿದೆ. ಜಿಲ್ಲೆಯಿಂದಲೂ ಸಾವಿರಾರು ಮಂದಿ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಮದು ಸತೀಶ ಕುಂಪಲ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.