ಪ್ರಜಾವಾಣಿ ವಾರ್ತೆ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂಳಲಾಗಿದೆ ಎಂಬ ದೂರಿಗೆ ಸಂಬಂಧಿಸಿ ಸಾಕ್ಷಿ ದೂರುದಾರ ತೋರಿಸಿದ ಹೊಸ ಜಾಗದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಶೋಧ ಕಾರ್ಯ ನಡೆಸಿದ್ದು, ಅಲ್ಲಿ ಮೃತದೇಹದ ಕುರುಹು ಸಿಕ್ಕಿಲ್ಲ.
ಧರ್ಮಸ್ಥಳದ ಗ್ರಾಮದ ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿ ಪಕ್ಕದ ಜಾಗದಲ್ಲಿ ಎರಡು ಕಡೆ ಅಗೆಯಲಾಯಿತು. ಕೆಲ ವರ್ಷಗಳ ಹಿಂದೆ ಅಲ್ಲಿ ಕಟ್ಟಡದ ಅವಶೇಷ ಸುರಿದು ಸಮತಟ್ಟು
ಗೊಳಿಸಲಾಗಿತ್ತು. ಅಗೆಯುವಾಗ ಸಿಕ್ಕಿದ ಕಟ್ಟಡದ ಭಾರಿ ಗಾತ್ರದ ಅವಶೇಷಗಳನ್ನು ಸರಿಸಿ ಕೆಲಸ ಮುಂದುವರಿಸಬೇಕಾಗಿದ್ದರಿಂದ ಅಗೆಯುವ ಕಾರ್ಯ ತುಸು ನಿಧಾನವಾಗಿ ಸಾಗಿತ್ತು.
‘ಬಾಹುಬಲಿ ಬೆಟ್ಟದ ರಸ್ತೆ ಬಳಿ 20 ಅಡಿ ಉದ್ದ, 20 ಅಡಿ ಅಗಲದಷ್ಟು ಜಾಗದಲ್ಲಿ 10 ಅಡಿಗಳಷ್ಟು ಅಗೆಯಲಾಗಿದೆ. ಅಲ್ಲಿ ಅವಶೇಷ ಪತ್ತೆಯಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಹಾಗೂ ವಿಧಿ ವಿಜ್ಞಾನ ತಜ್ಞರು ಸ್ಥಳದಲ್ಲಿದ್ದರು.
ಸಾಕ್ಷಿ ದೂರುದಾರ ಈವರೆಗೆ ಧರ್ಮಸ್ಥಳ ಗ್ರಾಮದಲ್ಲಿ 16 ಜಾಗ ತೋರಿಸಿದ್ದು ಅವುಗಳಲ್ಲಿ 15 ಕಡೆ ಶೋಧಕಾರ್ಯ ಮುಗಿದಿದೆ. ಎರಡು ಕಡೆ ಮೃತದೇಹಗಳ ಅವಶೇಷ ಸಿಕ್ಕಿದೆ. ಆತ ಮೊದಲ ದಿನ ತೋರಿಸಿದ್ದ 13ನೇ ಜಾಗದಲ್ಲಿ ಇನ್ನಷ್ಟೇ ಶೋಧ ಕಾರ್ಯ ನಡೆಯಬೇಕಿದೆ.
‘ಧರ್ಮಸ್ಥಳಕ್ಕೆ ಅಪಖ್ಯಾತಿ ಸಲ್ಲ’
ಹಾವೇರಿ: ‘ಧರ್ಮಸ್ಥಳ ದೇವಸ್ಥಾನವು ಹಿಂದೂಗಳ ಪವಿತ್ರ ಸ್ಥಳ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥ ಕ್ಷೇತ್ರಕ್ಕೆ ಅಪಖ್ಯಾತಿ ಹಾಗೂ ಕಪ್ಪುಚುಕ್ಕೆ ತರುವ ಕೆಲಸ ನಡೆದಿದೆ’ ಎಂದು ಹರಿಹರ ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು. ‘ಹಿಂದೂಗಳು ಒಗ್ಗಟ್ಟಾಗಿ ಹೆಗ್ಗಡೆ ಅವರ ಪರ ನಿಲ್ಲಬೇಕು. ಇಂದು ಅವರಿಗೆ ಬಂದ ಪರಿಸ್ಥಿತಿ ಮುಂದೆ ನಮಗೂ ಬರಬಹುದು’ ಎಂದೂ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ‘ವಿಶ್ವದಾದ್ಯಂತ ಹಿಂದೂ ಧರ್ಮ ಬೆಳೆಯುತ್ತಿದೆ. ವಿದೇಶಿಯರೂ ಸ್ವಇಚ್ಛೆಯಿಂದ ಧರ್ಮಕ್ಕೆ ಆಕರ್ಷಿತರಾಗುತ್ತಿದ್ದಾರೆ. ಮೂಲಭೂತವಾದಿಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಹಿಂದೂ ದೇವಸ್ಥಾನ ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಿಗೆ ಕಂಟಕ ತರುತ್ತಿದ್ದಾರೆ’ ಎಂದರು. ‘ಧರ್ಮಸ್ಥಳದ ಪ್ರಕರಣಗಳ ಬಗ್ಗೆ ಎಸ್‌ಐಟಿ ತನಿಖೆ ನಡೆದಿದೆ. ನ್ಯಾಯಾಲಯ ಇದೆ. ಈಗ ಬಾಯಿಗೆ ಬಂದಂತೆ ಮಾತನಾಡಿ ಹೆಸರಿಗೆ ಧಕ್ಕೆ ತರುವುದು ಸರಿಯಲ್ಲ. ಧರ್ಮದ ಮೇಲೆ ಅಧರ್ಮ ಮಾಡುತ್ತಿರುವ ಪಾಪಿಗಳಿಂದ ಇದೆಲ್ಲ ಆಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.