ADVERTISEMENT

ಧರ್ಮಸ್ಥಳ ಕುರಿತು ಷಡ್ಯಂತ್ರ: ಎನ್‌ಐಎ, ಇ.ಡಿ ತನಿಖೆಗೆ ಧರ್ಮಜಾಗೃತಿ ಸಭೆ ಆಗ್ರಹ

ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಧರ್ಮಜಾಗೃತಿ ಸಭೆ; ಮುಖಂಡರಿಂದ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 20:54 IST
Last Updated 22 ಆಗಸ್ಟ್ 2025, 20:54 IST
ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಆಯೋಜಿಸಿದ್ದ ಧರ್ಮಜಾಗೃತಿ ಸಭೆಯಲ್ಲಿ ಜೈಕಾರ ಕೂಗಿ ಒಗ್ಗಟ್ಟು ಪ್ರದರ್ಶಿಸಲಾಯಿತು  ಪ್ರಜಾವಾಣಿ ಚಿತ್ರ 
ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಆಯೋಜಿಸಿದ್ದ ಧರ್ಮಜಾಗೃತಿ ಸಭೆಯಲ್ಲಿ ಜೈಕಾರ ಕೂಗಿ ಒಗ್ಗಟ್ಟು ಪ್ರದರ್ಶಿಸಲಾಯಿತು  ಪ್ರಜಾವಾಣಿ ಚಿತ್ರ    

ಮಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ ಕುಂದುಂಟುಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಒಗ್ಗಟ್ಟಿನ ಪ್ರದರ್ಶನಕ್ಕೆ ಕಹಳೆ ಮೊಳಗಿಸಲಾಯಿತು.

ಮುಖಂಡ ಎ.ಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿವಿಧ ಕ್ಷೇತ್ರ, ಭಾಷೆಗಳ ಜನರು ಹಿಂದೂ ಧರ್ಮೀಯರ ಭಾವನೆಗಳನ್ನು ಕೆಣಕುವ ಕುತಂತ್ರ ಆಗಾಗ ನಡೆಯುತ್ತಿದ್ದು ಇದನ್ನು ಒಟ್ಟಾಗಿ ಹಿಮ್ಮೆಟ್ಟಿಸಬೇಕು ಎಂದರು.

ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ ‘ಧರ್ಮಸ್ಥಳದ ತೇಜೋವಧೆ ಮಾಡುವ ವಿಷಯವನ್ನು ಮಾಧ್ಯಮಗಳಲ್ಲಿ ಕೇಳುವುದು ಕೂಡ ಬೇಸರ ತರಿಸಿದೆ. ಆದ್ದರಿಂದ ಆ ಸುದ್ದಿಗಳನ್ನು ನೋಡುವುದನ್ನೇ ನಿಲ್ಲಿಸಿದ್ದೇನೆ’ ಎಂದರು.

ADVERTISEMENT

‘ಹಿಂದುಗಳ ನಡುವೆ ಒಡಕು ಉಂಟುಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಈಚೆಗೆ ಕಟೀಲು ಕ್ಷೇತ್ರವನ್ನು ಹೊಗಳಿ ಧರ್ಮಸ್ಥಳಕ್ಕೆ ಅವಹೇಳನ ಮಾಡುವ ಪ್ರಯತ್ನವೂ ನಡೆದಿತ್ತು. ಅಂಥ ಅಪಾಯಗಳಿಗೆ ಅವಕಾಶ ಮಾಡಿಕೊಡಬಾರದು. ವೀರೇಂದ್ರ ಹೆಗ್ಗಡೆಯವರು ಈಗ ‘ಸ್ಥಾನು’ವಿನಂತೆ ಸುಮ್ಮನಿದ್ದಾರೆ. ಅವರನ್ನು ಮತ್ತೆ ದೇವರ ಸ್ಥಾನಕ್ಕೆ ಏರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಧರ್ಮಸ್ಥಳದ ವಿಷಯದಲ್ಲಿ ನಡೆಯುತ್ತಿರುವುದು ಹಿಂದು ಧರ್ಮಕ್ಕೆ ಧಕ್ಕೆ ತರುವ ವಿಷಯ. ಆದ್ದರಿಂದ ಎಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬೇಕು’ ಎಂದು ಅವರು ಹೇಳಿದರು.

ನಾಗರಾಜ ಶೆಟ್ಟಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಎಲ್ಲರಿಗೆ ನೆರವಾದ ಧರ್ಮಸ್ಥಳದ ಪರವಾಗಿ ಎಲ್ಲ ಸಮಾಜಗಳು ಒಟ್ಟಾಗಬೇಕು. ರಾಜ್ಯದ ಬೇರೆ ಬೇರೆ ಕಡೆಯ ಜನರನ್ನು ಸೇರಿಸಿ ಸದ್ಯದಲ್ಲೇ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಳಿನ್ ಕುಮಾರ್ ಕಟೀಲ್‌, ಶರಣ್ ಪಂಪ್‌ವೆಲ್, ಹರಿಕೃಷ್ಣ ಪುನರೂರು, ದಿಲೀಪ್ ಜೈನ್, ಶ್ರೀನಾಥ್ ಎಂ, ಗುರುರಾಜ ಎಸ್ ಪಡುಪಣಂಬೂರು, ಪ್ರಸಾದ್ ರೈ ಕಲ್ಲಿಮಾರು, ಶರವು ರಾಘವೇಂದ್ರ ಶಾಸ್ತ್ರಿ, ಭುವನಾಭಿರಾಮ ಉಡುಪ, ಸೀತಾರಾಮ ಕೊಂಚಾಡಿ, ಅಜಿತ್ ಕುಮಾರ್ ರೈ, ಮುರಳಿ, ಮಹಾಬಲ ಕೊಟ್ಟಾರಿ, ಎಚ್‌.ಕೆ ಪುರುಷೋತ್ತಮ, ಭರತ್ ಉಳ್ಳಾಲ್ ಪಾಲ್ಗೊಂಡಿದ್ದರು.

‘ಚಾಟಿಯಿಂದ ಉತ್ತರ ನೀಡಬೇಕು’

‘ಮಾತಿನ‌ ಮಾರುಕಟ್ಟೆಯಲ್ಲಿ ತುಟಿ ಬಿಚ್ಚದವರು ಬದುಕಲು ಅರ್ಹರಲ್ಲ. ಆದ್ದರಿಂದ ಹಿಂದುಗಳು ಈಗ ಮಾತನಾಡಬೇಕು ಚಾಟಿಯಿಂದ ಉತ್ತರ ಕೊಡಬೇಕು. ಮುಸುಕುಧಾರಿ ನ್ಯಾಯಾಲಯಕ್ಕೆ ಒಪ್ಪಿಸಿದ ಬುರುಡೆಯ ಎಫ್‌ಎಸ್‌ಎಲ್‌ ವರದಿ ಇನ್ನೂ ಬಂದಿಲ್ಲ. ಆ ಬುರುಡೆ ಆತನಿಗೆ ತಿಮರೋಡಿ ಮನೆಯಿಂದ ಲಭಿಸಿತ್ತೇ ಎಂಬುದರ ಬಗ್ಗೆ ತನಿಖೆ ಆಗಬೇಕು. ಗೃಹಸಚಿವರನ್ನೇ ಹೀಯಾಳಿಸಿದ ತಿಮರೋಡಿ ವಿರುದ್ಧ ಪೊಲೀಸಲು ಸುಮ್ಮನಿದ್ದಾರೆ. ಖಾದಿಯವರು ಓಟಿಗಾಗಿ ಕಾಯುತ್ತಾ ಇದ್ದಾರೆ. ತಿಮರೋಡಿ ಜೈಲಿನಲ್ಲೇ ಉಳಿಯುವಂತಾಗಬೇಕು. ಧರ್ಮರಕ್ಷಣೆಗಾಗಿ ಎಲ್ಲರೂ ಕೃಷ್ಣನಂತೆ ಹೋರಾಡಬೇಕು’ ಎಂದು ಮುಖಂಡ ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಇಂದು ವಿಚಾರಣೆಗೆ ಹಾಜರಾಗಲು ಯೂಟ್ಯೂಬರ್‌ ಸಮೀರ್‌ಗೆ ನೋಟಿಸ್

ಬೆಳ್ತಂಗಡಿ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಬಗ್ಗೆ ‘ದೂತ’ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊ ಪ್ರಸಾರ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಶನಿವಾರ (ಆ.23) ಧರ್ಮಸ್ಥಳ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮೀರ್ ಎಂ.ಡಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ವಿಡಿಯೊ ಪ್ರಸಾರ ಕುರಿತು ಜು.12ರಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಮೀರ್‌ಗೆ 3 ಬಾರಿ ನೋಟಿಸ್ ನೀಡಲಾಗಿತ್ತು. ಅವರನ್ನು ಬಂಧಿಸಲು ಬೆಂಗಳೂರಿಗೆ ಧರ್ಮಸ್ಥಳ ಪೊಲೀಸರು ತೆರಳಿದ್ದರು. ಆದರೆ, ಸಮೀರ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

‘ಧರ್ಮ ಉಲ್ಲೇಖಿಸಿ ಗೊಂದಲ ಸೃಷ್ಟಿ’

ಮೈಸೂರು: ‘ಧರ್ಮಸ್ಥಳ ಪ್ರಕರಣದಲ್ಲಿ ಧರ್ಮದ ಸೂಕ್ಷ್ಮ ವಿಚಾರವನ್ನು ಮುನ್ನೆಲೆಗೆ ತಂದು ಗೊಂದಲ ಸೃಷ್ಟಿಸುವುದು ಸರಿಯಲ್ಲ’ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಹಾಗೂ ಎಂ.ಎಲ್‌.ಪರಶುರಾಮ್‌ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರಕರಣದಲ್ಲಿ ಎಸ್‌ಐಟಿಯ ದಿಕ್ಕು ತಪ್ಪಿಸಲಾಗುತ್ತಿದೆ. ಪಾರದರ್ಶಕವಾಗಿ ತನಿಖೆ ನಡೆಸಲು ಬಿಡಬೇಕು’ ಎಂದು ಆಗ್ರಹಿಸಿದರು.

‘ಧರ್ಮಸ್ಥಳದ ಬಗ್ಗೆ ಗೌರವವಿದೆ. ಆದರೆ ಅಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವು, ಅನಾಥ ಶವಗಳ ಬಗ್ಗೆ ತನಿಖೆ ನಡೆಯಲಿ ಎಂಬುದು ಎಲ್ಲರ ಆಶಯ. ಹೋರಾಟಗಾರರನ್ನು ಬಂಧಿಸಲಾಗುತ್ತಿದೆ. ತನಿಖೆ ವರದಿಗಾಗಿ ಕಾಯಬೇಕೇ ಹೊರತು, ಇಲ್ಲದ ವಿಷಯಗಳ ಕುರಿತು ಚರ್ಚೆ ಸೂಕ್ತವಲ್ಲ’ ಎಂದರು.

ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರೊ.ಸಬೀಹಾ ಭೂಮಿಗೌಡ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪ್ರಗತಿಪರ ಮಹಿಳಾ ಸಂಘಟನೆಯ ರತಿರಾವ್, ಪಿಯುಸಿಎಲ್‌ ಸಂಚಾಲಕ ಕಮಲ್ ಗೋಪಿನಾಥ್, ದಸಂಸದ ಹರಿಹರ ಆನಂದಸ್ವಾಮಿ ಇದ್ದರು.

ಮಟ್ಟೆಣ್ಣನವರ ಸೇರಿ ಹಲವರ ವಿರುದ್ಧ ಪ್ರಕರಣ

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧಿಸುವ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ, ಮಾನಹಾನಿಕರ ಸಂದೇಶಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿದ ಆರೋಪದಡಿ ಗಿರೀಶ ಮಟ್ಟೆಣ್ಣ ನವರ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬ್ರಹ್ಮಾವರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಮತ್ತು ಅಧಿಕಾರಿಗಳು ತಿಮರೋಡಿ ಅವರನ್ನು ಬಂಧಿಸಲು ಆ.21ರಂದು ಬೆಳಿಗ್ಗೆ ಬೆಳ್ತಂಗಡಿ ತಾಲ್ಲೂಕು ಉಜಿರೆ ಗ್ರಾಮದ ತಿಮರೋಡಿ ಹೌಸ್‌ಗೆ ತೆರಳಿದ್ದರು.

ಆಗ ಗಿರೀಶ, ಜಯಂತ್ ಹಾಗೂ ಇತರ 10 ಮಂದಿ ಬಂಧನಕ್ಕೆ ತಡೆಯೊಡ್ಡಿದ್ದರು. ಅಧಿಕಾರಿಗಳ ಮೇಲೆ ಬಲಪ್ರಯೋಗ ಮಾಡಿದ್ದು, ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ಪ್ರಸಾರ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಬ್ರಹ್ಮಾವರ ಸಬ್‌ ಇನ್‌ಸ್ಪೆಕ್ಟರ್‌ ದೂರು ನೀಡಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕೆ. ತಿಳಿಸಿದ್ದಾರೆ.

ಬಂಧಿಸಿದ ನಂತರ ಪೊಲೀಸ್‌ ವಾಹನದಲ್ಲಿ ಬರಲು ತಿಮರೋಡಿ ನಿರಾಕರಿಸಿದರು. ಸ್ವಂತ ಕಾರಿನಲ್ಲಿ ಬರುತ್ತಿದ್ದ ವೇಳೆ 10 ರಿಂದ 15 ಕಾರುಗಳಲ್ಲಿ ಜನರು ಪೊಲೀಸರ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು ತೊಂದರೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಭಾರತೀಯ ನ್ಯಾಯಸಂಹಿತೆ 2023ರ ಕಲಂ 132, 189(2), 351(2), 263(a), 190, 262ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಠಾಣೆ ಮುಂದೆ ಹಾಜರಾದ ಗಿರೀಶ: ಗಿರೀಶ ಮಟ್ಟೆಣ್ಣನವರ ಶನಿವಾರ ಬೆಳ್ತಂಗಡಿ ಠಾಣೆ ಮುಂದೆ ಹಾಜರಾದರು. ಈ ವೇಳೆ ಮಾತನಾಡಿದ ಅವರು ‘ತಿಮರೋಡಿ ಬಂಧಿಸಲು 100ರಷ್ಟು ಪೊಲೀಸರು ಗುರುವಾರ ಬಂದಿದ್ದರು. ಮನೆಯವರು ಆತಂಕಕ್ಕೆ ಒಳಗಾಗಿದ್ದರು. ನಾವೇ ತಿಮರೋಡಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದೆವು. ಈಗ ಎಫ್‌ಐಆರ್‌ ದಾಖಲಾಗಿದೆ. ಬಂಧಿಸುವುದಾದರೆ ಬಂಧಿಸಲಿ ಎಂದು ಠಾಣೆಗೆ ಹಾಜರಾಗಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.