ಉಳ್ಳಾಲ (ದಕ್ಷಿಣ ಕನ್ನಡ): ‘ದೇವಸ್ಥಾನದ ವಠಾರದಲ್ಲಿ ಶವ ಹೂಳುವುದು ಭಾರತದ ಸಂಸ್ಕೃತಿ. ಮಸೀದಿ, ಚರ್ಚ್‌ಗಳಲ್ಲೂ ಹೂಳಲಾಗುತ್ತದೆ’ ಎಂದು ಹಿರಿಯ ರಾಜಕಾರಣಿ ಬಿ.ಜನಾರ್ದನ ಪೂಜಾರಿ ಹೇಳಿದರು.
ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟಿನಲ್ಲಿ ಭಾನುವಾರ ಏರ್ಪಡಿಸಿದ್ದ ‘ಮುದ್ದುಕೃಷ್ಣ -2025’ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಧರ್ಮಸ್ಥಳದ ವಠಾರದಲ್ಲಿ ಎಸ್‌ಐಟಿಯವರು ಅಗೆಯುತ್ತಿದ್ದಾರೆ. ಆರೋಪ ಆಧರಿಸಿ ಶವಗಳನ್ನು ಹುಡುಕುತ್ತಿದ್ದಾರೆ. ಅಲ್ಲಿ ಏನೂ ಸಿಗಲಿಲ್ಲ. ಎಷ್ಟು ಹುಡುಕಿದರೂ ಸಿಗುವುದಿಲ್ಲ. ಆದರೆ, ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಆದರೂ ಮುಖ್ಯಮಂತ್ರಿ ಏಕೆ ಬಾಯಿ ಬಿಡುತ್ತಿಲ್ಲ. ಅವರು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ಧರ್ಮಸ್ಥಳ ಒಂದು ಸಮಾಜಕ್ಕೆ, ಜೈನರಿಗೆ ಮಾತ್ರ ಸೇರಿದ್ದಲ್ಲ. ಅದರ ಹೆಸರು ಹಾಳು ಮಾಡಲು ಯಮನಿಂದಲೂ ಸಾಧ್ಯವಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ, ನಿಮ್ಮ ಜೊತೆಗೆ ದೇಶ ಮಾತ್ರವಲ್ಲ, ಇಡೀ ಜಗತ್ತೇ ಇದೆ. ಈ ಪೂಜಾರಿ ಇದ್ದಾನೆ. ಕುದ್ರೋಳಿ ದೇವಸ್ಥಾನವಿದೆ’ ಎಂದರು.
‘ಪ್ರಧಾನಿ ಮೋದಿಯವರಿಗೆ ಧೈರ್ಯ, ತಾಕತ್ತು ಇದ್ದರೆ ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಬೇಕು. ಮಸೀದಿಗಳಲ್ಲಿ ಶವ ಹೂತಿಲ್ಲವೇ, ದೇವಸ್ಥಾನಗಳಲ್ಲಿ ಮಾತ್ರವೇ ಎಂದು ಕೇಳಬೇಕು’ ಎಂದರು.
ಹಿಂದೂ ದೇಗುಲಗಳನ್ನು ಟಾರ್ಗೆಟ್ ಮಾಡಲಾಗಿದೆ. ಎಸ್‌ಡಿಪಿಐ ಏಕೆ ಪ್ರತಿಭಟಿಸುತ್ತದೆ? ಅವರು ದೇಶದ್ರೋಹಿಗಳು. ಹಿಂದೆ ಅಯ್ಯಪ್ಪ ಸ್ವಾಮಿ, ಶನಿ ಶಿಂಗ್ಣಾಪುರ ದೇಗುಲ ಟಾರ್ಗೆಟ್ ಮಾಡಿದ್ದರು.ಬಸನಗೌಡ ಪಾಟೀಲ ಯತ್ನಾಳ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.